ರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಅಂಕ ಪಡೆದರಷ್ಟೆ ಸಾಲದು, ಸಾಮಾನ್ಯಜ್ಞಾನ, ಕೌಶಲ ಮುಖ್ಯ

43
Published on

ಮೈಸೂರು: ವಿದ್ಯಾರ್ಥಿನಿಯರು ಗುರಿ ಇಟ್ಟುಕೊಂಡು ಸಾಧನೆ ಮಾಡುವುದರ ಜತೆಗೆ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಎಚ್ಚರಿಕೆಯಿಂದ ನಡೆಯಬೇಕು ಎಂದು ಕುವೆಂಪುನಗರದ ಬಿಸಿಎಂ ಹಾಸ್ಟೆಲ್‌ನ ನಿಲಯಪಾಲಕ ಜಗದೀಶ್ ಜಿ.ಕೋರಿ ತಿಳಿಸಿದರು.

ರಾಜರಾಜೇಶ್ವರಿನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.85ರಷ್ಟಿದ್ದು, ಓದುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆಗಳು ಹೆಚ್ಚಾಗಿವೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಅಂಕ ಪಡೆದರಷ್ಟೆ ಸಾಲದು, ಸಾಮಾನ್ಯಜ್ಞಾನ, ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅತ್ಯಂತ ಕಡುಬಡತನದಲ್ಲಿ ಬೆಳೆದು ಉನ್ನತ ಶಿಖರಕ್ಕೆ ಏರಿದ ಮಹಾನಾಯಕರಾದರು. ಅವರ ಗುಣಗಳನ್ನು ಅಳವಡಿಸಿಕೊಂಡು ಮೊಬೈಲ್ ವಾಟ್ಸ್‌ಆ್ಯಪ್‌ನಿಂದ ದೂರವಿದ್ದು, ನಿರಂತರ ಪ್ರಯತ್ನದ ಮೂಲಕ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಹೆಚ್ಚು ಗಮನ ಕೊಟ್ಟು ಸಾಧನೆ ಮಾಡಿ ನಿಮ್ಮ ತಂದೆ-ತಾಯಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದರು.

ನಿಲಯಪಾಲಕರಾದ ಮಹಾಲಕ್ಷ್ಮೀ ಮಾತನಾಡಿ, ಸರ್ಕಾರ ನಿಮಗೆ ಎಲ್ಲ ಸೌಲಭ್ಯಗಳನ್ನು ನೀಡಿದ್ದು, ಇದರ ಸದುಪಯೋಗ ಪಡಿಸಿಕೊಂಡು ಯಶಸ್ವಿಯಾಗಿ. ಜತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಹಿರಿಯರಿಗೆ ಗೌರವ ನೀಡುವುದರ ಮೂಲಕ ಸಾಧನೆ ಮಾಡಿ ಉತ್ತಮ ಜೀವನ ಸಾಗಿಸಿ ಎಂದು ಹಾರೈಸಿದರು.

ಅಡುಗೆ ಸಿಬ್ಬಂದಿ ನಾಗರತ್ನ, ಶಶಿಕಲಾ, ಶಿವವಮ್ಮ, ಚಂದ್ರಕಲಾ, ಮಂಜುಳಾ, ವಿದ್ಯಾರ್ಥಿ ಮುಖಂಡರಾದ ಇಂದುಶ್ರೀ, ಎಂ.ಆರ್.ತನುಶ್ರೀ, ರಕ್ಷಿತಾ, ರಚನಾ, ಹುಲಿಗೆಮ್ಮ ಕೀರ್ತನಾ, ಅನನ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net