

ಮುದಗಲ್: ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಶುದ್ಧ ಕುಡಿವ ನೀರು ಪೂರೈಸುವ ಉದ್ದೇಶದಿಂದ ಕನ್ನಾಪುರಹಟ್ಟಿ ಸೇರಿ ವಿವಿಧೆಡೆಕೈಗೆತ್ತಿಕೊಳ್ಳಲಾದ ಜಲಧಾರೆ ಹಾಗೂ ಜೆಜೆಎಂ ಕಾಮಗಾರಿಯನ್ನು ರಾಜ್ಯ ಅಂದಾಜು ಸಮಿತಿ ಸದಸ್ಯರ ತಂಡ ಶುಕ್ರವಾರ ತರಾತುರಿಯಲ್ಲಿ ವೀಕ್ಷಣೆ ಮಾಡಿ ತೆರಳಿತು.
ಸಮಿತಿ ಅಧ್ಯಕ್ಷ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದ ತಂಡ ಪಟ್ಟಣ ಸಮೀಪದ ಕನ್ನಾಪುರಹಟ್ಟಿ, ಕಾಚಾಪುರ, ಚಿತ್ತಾಪುರ, ಅಡವಿಬಾವಿ ಮಾರ್ಗಗಳ ಮೂಲಕ ಗ್ರಾಮೀಣ ಭಾಗಗಳಿಗೆ ಸಮರ್ಪಕ ಕುಡಿವ ನೀರು ಪೂರೈಕೆ ಯೋಜನೆ ಅನುಷ್ಠಾನ ಹಾಗೂ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲಿಸಿತು.
ಲಿಂಗಸುಗೂರು ತಾಲೂಕು ಕೊನೇ ಭಾಗವಾದ ಚಿತ್ತಾಪುರ ಗ್ರಾಮಕ್ಕೆ ಆಗಮಿಸಿದ ಅಂದಾಜು ಸಮಿತಿ ತಂಡ ಕೇವಲ ಅರ್ಧಗಂಟೆಯಲ್ಲಿಯೇ ಕಾಮಗಾರಿ ವೀಕ್ಷಣೆ ಮಾಡಿ ಹಿಂದಿರುಗಿತು. ಈಗಾಗಲೇ ಉಪ್ಪಾರ ನಂದಿಹಾಳ, ಚಿತ್ತಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅರೆಬರೆ ನಿರ್ವಹಣೆ ಮಾಡಿದ ಜೆಜೆಎಂ ಕಾಮಗಾರಿಗಳ ಬಗ್ಗೆ ಅಂದಾಜು ಸಮಿತಿ ಕಾರಿನಲ್ಲಿಯೇ ಕುಳಿತು ಪರಿಶೀಲಿಸಿತು.
ಕನ್ನಾಪುರಹಟ್ಟಿ ಹೊರವಲಯದಲ್ಲಿ ಟ್ಯಾಂಕ್, ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡದೆ ತೆರಳಿರುವುದು ಹಲವು ಸಂಶಯಕ್ಕೆ ಎಡೆಮಾಡಿದೆ.