

ಹೊಳೆನರಸೀಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಪಡೆದ ಅಂಕಗಳೊಂದಿಗೆ ವೃತ್ತಿ ಕೌಶಲವಿದ್ದರೆ ಕೆಲಸ ಗಿಟ್ಟಿಕೊಳ್ಳಲು ಸಾಧ್ಯ ಎಂದು ಪಡವಲಹಿಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಫಯಾಜ್ ಪಾಷಾ ತಿಳಿಸಿದರು.
ಪಡವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ಹದಿನೈದು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಅಪರೂಪ. ಈ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಿ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಪ್ರತಿ ವರ್ಷ ಭಾರತದಲ್ಲಿ 85 ಲಕ್ಷ ವಿದ್ಯಾರ್ಥಿಗಳು ಪದವಿ ನಂತರ ಕೌಶಲ ಪಡೆಯಲು ಖಾಸಗಿ ತರಬೇತಿ ಸಂಸ್ಥೆಗಳಿಗೆ ಸೇರಿ ಲಕ್ಷಾಂತರ ರೂ. ಶುಲ್ಕ ಕಟ್ಟುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ದುಬಾರಿಯಾಗಿದ್ದು, ಇದನ್ನರಿತು ದೇವೇಗೌಡ ಪದವಿ ಕಾಲೇಜಿನಲ್ಲಿ ಇಂತಹ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಂಶುಪಾಲ ಕೆ.ಸಿ.ವಿಶ್ವನಾಥ್ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಮಾದೇಶ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಕೆ.ಭುವನೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪಿ.ಆರ್.ಶಿವಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಹೇಶ್, ಧರ್ಮೋಜೀರಾವ್, ಪ್ರಹ್ಲಾದ್ ಇತರರು ಹಾಜರಿದ್ದರು.