

ಮಂಜುನಾಥ ಅಂಗಡಿ ಧಾರವಾಡ
ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳು ಸ್ಥಾಪನೆಗೊಂಡಿವೆ. ಗ್ರಾಮೀಣ ಪ್ರದೇಶದ ದುಡಿಯುವ ಮಹಿಳೆಯರ 4 ವರ್ಷದೊಳಗಿನ ಮಕ್ಕಳ ಪೋಷಣೆಯ ಉದ್ದೇಶದಿಂದ ‘ಕೂಸಿನ ಮನೆ’ಗಳನ್ನು ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಜಿಲ್ಲೆಯ 102 ಗ್ರಾ.ಪಂ.ಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ ಸೂಚಿಸಲಾಗಿದೆ. ಆಗಸ್ಟ್ 15ರಿಂದ ಕೇಂದ್ರಗಳಿಗೆ ಪ್ರಾಯೋಗಿಕವಾಗಿ ಚಾಲನೆ ದೊರೆತಿದೆ.
ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ದುಡಿಯುವ ಮಹಿಳೆಯರಿಗೆ ವರದಾನ. ಪಂಚಾಯಿತಿಗಳ ವಿವಿಧ ಕಾಮಗಾರಿಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡುವ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲು ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ ಇತರೆ ಕೆಲಸಗಳಲ್ಲಿ ತೊಡಗಿಕೊಂಡಿರುವ ತಾಯಂದಿರ ಮಕ್ಕಳನ್ನು ವ್ಯವಸ್ಥಿತವಾಗಿ ಪೋಷಣೆಯ ಉದ್ದೇಶದಿಂದ ‘ಕೂಸಿನ ಮನೆ’ ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಜಿಲ್ಲೆಯ 145 ಗ್ರಾಮ ಪಂಚಾಯಿತಿಗಳ ಪೈಕಿ ಆಯ್ದ 102 ಗ್ರಾ.ಪಂ.ಗಳಲ್ಲಿ ಕೂಸಿನ ಮನೆ ಆರಂಭಗೊಂಡಿವೆ. ತಿಂಗಳಲ್ಲಿ 26 ದಿನ ಪ್ರತಿದಿನ 6ರಿಂದ 8 ಗಂಟೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಮಕ್ಕಳ ಪೋಷಣೆಗಾಗಿಯೇ ತಾಯಂದಿರು ಕೂಲಿ ಕೆಲಸ, ಇತರ ಉದ್ಯೋಗ ತೊರೆಯುತ್ತಿದ್ದಾರೆ. ಅಲ್ಲದೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವುದು ಕೂಸಿನ ಮನೆ ಸ್ಥಾಪನೆಯ ಆಶಯ.
ಈ ಕೇಂದ್ರಗಳಲ್ಲಿ ಮಕ್ಕಳ ಪಾಲನೆಗಾಗಿ ಕನಿಷ್ಠ 10ನೇ ತರಗತಿ ಪಾಸಾದ ನರೇಗಾ ಉದ್ಯೋಗ ಚೀಟಿ ಹೊಂದಿದ ಮಹಿಳಾ ಕೂಲಿ ಕಾರ್ವಿುಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರನ್ನು ಕೇರ್ ಟೇಕರ್ಸ್ ಎಂದು ಗುರುತಿಸಿ ಅವರಿಗೂ ದಿನಕ್ಕೆ ನರೇಗಾ ಕೂಲಿ ಮೊತ್ತ 316 ರೂ. ದಿನಗೂಲಿ ನೀಡಲಾಗುತ್ತಿದೆ. ಸ್ಥಳೀಯ ಅಥವಾ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರು ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ತಪಾಸಣೆ, ಸಮತೋಲನ ಆಹಾರದ ಸಲಹೆ ನೀಡುತ್ತಾರೆ.
ಸದ್ಯ ಅಳ್ನಾವರ ತಾಲೂಕಿನಲ್ಲಿ 2, ಅಣ್ಣಿಗೇರಿ 7, ಧಾರವಾಡ 24, ಹುಬ್ಬಳ್ಳಿ 20, ಕಲಘಟಗಿ 20, ಕುಂದಗೋಳ 17 ಹಾಗೂ ನವಲಗುಂದ ತಾಲೂಕಿನಲ್ಲಿ 12 ಸೇರಿ ಜಿಲ್ಲೆಯಾದ್ಯಂತ 102 ಕೂಸಿನ ಮನೆಗಳು ಪ್ರಾಯೋಗಿಕವಾಗಿ ಆರಂಭಗೊಂಡಿವೆ. ಮಕ್ಕಳ ಗಮನ ಸೆಳೆಯುವಂಥ ಆಟ, ಪಾಠ ಸಾಮಗ್ರಿಗಳು ಹಾಗೂ ತೊಟ್ಟಿಲು ಇರಲಿವೆ. ಮಹಿಳಾ ಕೃಷಿ ಕಾರ್ವಿುಕರು, ಕೂಲಿ ಕಾರ್ವಿುಕರು, ತರಕಾರಿ ಮಾರಲು ಬೇರೆ ಊರುಗಳಿಗೆ ಹೋಗುವ ತಾಯಂದಿರಿಗೆ ಕೂಸಿನ ಮನೆಗಳು ಅನುಕೂಲವಾಗಲಿವೆ.
ದುಡಿಯುವ ಮಹಿಳೆಯರ ಮೂರೂವರೆ ವರ್ಷದೊಳಗಿನ ಮಕ್ಕಳನ್ನು ಹಗಲು ವೇಳೆ ಪಾಲನೆ ಮಾಡಲು ಶಿಶುಪಾಲನಾ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ರಾಜ್ಯಾದ್ಯಂತ ಶೀಘ್ರದಲ್ಲೇ ಅಧಿಕೃತವಾಗಿ ಆರಂಭಗೊಳ್ಳಲಿವೆ. ಮಕ್ಕಳ ಪಾಲನೆಗಾಗಿ ಕೂಲಿ ಕೆಲಸ ಬಿಡುವ ತಾಯಂದಿರಿಗೆ ಇವು ಅನುಕೂಲವಾಗಲಿವೆ. - ಸ್ವರೂಪ ಟಿ.ಕೆ., ಜಿ.ಪಂ. ಸಿಇಒ, ಧಾರವಾಡ