

ಹುಬ್ಬಳ್ಳಿ: ವಿದ್ಯಾರ್ಥಿಗಳ ಜೀವನ ಅಮೂಲ್ಯವಾದುದು. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುವುದರ ಜತೆಗೆ ಸತತ ಪರಿಶ್ರಮದ ಮೂಲಕ ಗುರಿ ತಲುಪಬೇಕು ಎಂದು ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಐಎಂಎಸ್ಆರ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಮ್ಯಾಡ್ಸ್ ಮೀಟ್-2ಕೆ23 ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಯಶಸ್ಸು ಎನ್ನುವುದು ಸುಲಭವಾಗಿ ಸಿಗುವುದಿಲ್ಲ. ಸಾಧನೆ ಮಾಡಬೇಕು ಎಂಬ ಹುಚ್ಚು ಕನಸು ವಿದ್ಯಾರ್ಥಿಗಳಲ್ಲಿ ಇರಬೇಕು. ನಿಮ್ಮ ಸಾಹಸ, ಪ್ರಯತ್ನವನ್ನು ಕಂಡು ಕೆಲವರು ಅಪಹಾಸ್ಯ ಮಾಡಬಹುದು. ನೀವು ಸಾಗುವ ಮಾರ್ಗದ ಬಗ್ಗೆ ನಿಮಗೆ ನಂಬಿಕೆ ಮತ್ತು ಪ್ರೀತಿ ಇದ್ದರೆ ಸಾಕು. ಅದಕ್ಕೆ ತಕ್ಕ ಮಾರ್ಗದರ್ಶನ, ಅಧ್ಯಯನ, ಆತ್ಮವಿಶ್ವಾಸ ಇದ್ದರೆ ಒಂದಲ್ಲ ಒಂದು ದಿನ ಸಾಧನೆಯ ಶಿಖರ ಏರಬಹುದು ಎಂದರು.
ಹುಬ್ಬಳ್ಳಿಯ ಫರ್ನ್ ರೆಸಿಡೆನ್ಸಿಯ ಪ್ರಧಾನ ವ್ಯವಸ್ಥಾಪಕ ಗೌತಮ ಬ್ಯಾನರ್ಜಿ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿದರು, ಐಎಂಎಸ್ಆರ್ನ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಕೆ. ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂಬವಿ ಪ್ರಾರ್ಥಿಸಿದರು. ವರ್ಷಾ ದಾಸನೂರ ಮತ್ತು ಸಹನಾ ಜಾಧವ ನಿರೂಪಿಸಿದರು. ಕೀರ್ತಿ, ಯಶ್ ಮತ್ತು ನಿಖಿಲ್ ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ಅಮಿತ ಅಂಗಡಿ ವಂದಿಸಿದರು.