ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

10 bannur 1 .
ಬನ್ನೂರಿನ ಸಮೀಪದ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಮಂಗಳವಾರ ವಿದ್ಯಾರ್ಥಿಗಳ ತಂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು. ಬಿ.ಎನ್.ಸುರೇಶ್, ಎನ್.ಎಂ.ರಾಮಚಂದ್ರ, ಬಿ.ಎಸ್.ಯೋಗೇಂದ್ರ, ದೀಪಕ್‌ಕುಮಾರ್‌ಜೈನ್, ವಿಮಲಾ ಇತರರಿದ್ದರು.
Published on

 ಬನ್ನೂರು : ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಆರೋಹಣ ಸೆಂಟ್ರಲ್ ಸ್ಕೂಲ್‌ನ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಸಮೀಪದ ಕುಳ್ಳನಕೊಪ್ಪಲು ಗ್ರಾಮದಲ್ಲಿರುವ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ತಂಡವನ್ನು ಅಭಿನಂದಿಸಿ ಮಾತನಾಡಿದರು.

ಉತ್ತಮ ತರಬೇತಿಯಿಂದ ವಿದ್ಯಾರ್ಥಿನಿಯರ ತಂಡ ದಸರಾ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದ ಮಹಿಳಾ ವಿಭಾಗದಲ್ಲಿ ಭಾಗವಹಿಸಿ, ಮೊದಲ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡ ಸೋಸಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಕ್ರೀಡೆಯು ಫಲಿತಾಂಶದ ಬಗ್ಗೆ ಮಾತ್ರವಲ್ಲದೆ, ಕ್ರೀಡಾಪಟುಗಳು ಪ್ರದರ್ಶಿಸುವ ಕೌಶಲ, ಸಾಮರ್ಥ್ಯ, ಅವರ ಶೈಲಿಯ ಮೂಲಕ ಕಲಾತ್ಮಕ ಮೆಚ್ಚುಗೆ ಗಳಿಸುತ್ತದೆ. ಕ್ರೀಡೆಯು ಹೃದಯದ ಆರೋಗ್ಯ, ರೋಗನಿರೋಧಕ ಶಕ್ತಿ, ಮೂಳೆಗಳ ಆರೋಗ್ಯ ಹೆಚ್ಚಿಸುತ್ತದೆ. ದೇಹದ ತೂಕದ ನಿರ್ವಹಣೆ, ಒತ್ತಡ ಮತ್ತು ಖಿನ್ನತೆ ಶಮನ, ಆತ್ಮವಿಶ್ವಾಸದ ಹೆಚ್ಚಳ, ಸಕಾರಾತ್ಮಕ ಚಿಂತನೆ, ಸಾಮಾಜಿಕ ಮತ್ತು ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ, ಶಿಸ್ತು ನಿಯಮ ಪಾಲನೆಯ ಗುಣವನ್ನು ಕಲಿಸುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಷ್ಟೆ ಕ್ರೀಡೆಗೂ ಮಹತ್ವ ನೀಡುವ ಮೂಲಕ ಯಶಸ್ಸನ್ನು ಪಡೆಯಬಹುದು ಎಂದು ತಿಳಿಸಿದರು.

ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಬಿ.ಎನ್.ಸುರೇಶ್, ಗೌರವ ಕಾರ್ಯದರ್ಶಿ ಬಿ.ಎಸ್.ಯೋಗೇಂದ್ರ, ದೀಪಕ್‌ಕುಮಾರ್ ಜೈನ್, ಪ್ರಾಂಶುಪಾಲೆ ವಿಮಲಾ, ಮುಖ್ಯಶಿಕ್ಷಕಿ ಲಕ್ಷ್ಮೀ, ತರಬೇತಿದಾರ ಶ್ರೀನಿವಾಸ್, ದೈಹಿಕ ಶಿಕ್ಷಕ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net