

ಕೆ.ಎಂ.ದೊಡ್ಡಿ: ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಲಿದೆ ಎಂದು ಸಮಾಜ ಸೇವಕಿ ಚೈತ್ರಾ ಶಶಿಧರ್‌ಗೌಡ ಅಭಿಪ್ರಾಯಪಟ್ಟರು.
ಭಾನುವಾರ ಸಮೀಪದ ದೇವರಹಳ್ಳಿ ಗ್ರಾಮದಲ್ಲಿ ಡಿವಿ ಬಾಯ್ಸ ವತಿಯಿಂದ ಮಾರಮ್ಮ ಕಪ್-2024 ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಯುವಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಒಳ್ಳೆಯ ಬೆಳವಣಿಗೆ. ಕ್ರೀಡೆಯಲ್ಲಿನ ಸಾಧನೆಯು ಉದ್ಯೋಗ ಕ್ಷೇತ್ರದಲ್ಲೂ ಅವಕಾಶ ಗಿಟ್ಟಿಸಿಕೊಳ್ಳಲು ನೆರವಾಗಲಿದೆ ಎಂದರು.
ದೇಸಿ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿಯು ಗ್ರಾಮೀಣ ಪ್ರದೇಶದ ಮಕ್ಕಳ ಅಚ್ಚುಮೆಚ್ಚಿನ ಆಟ. ಇದಕ್ಕೆ ರಾಷ್ಟ್ರೀಯ ಮನ್ನಣೆಯು ದೊರೆತಿದೆ. ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ-ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪುರುಷ ಪ್ರಧಾನವಾಗಿತ್ತು. ಕಬಡ್ಡಿ ಆಟದಲ್ಲಿ ಮಹಿಳೆಯರು ಸಕ್ರಿಯರಾಗಿರುವುದು ನೇಪಥ್ಯಕ್ಕೆ ಸರಿಯುವ ಹಂತದಲ್ಲಿದ್ದ ಕಬಡ್ಡಿ ಆಟ ಮತ್ತಷ್ಟು ಜನಪ್ರಿಯಗೊಳ್ಳಲಿದೆ. ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೆ ಕ್ರೀಡೆಯಲ್ಲಿ ಸಕ್ರಿಯರಾಗುವುದು, ಕ್ರೀಡಾಸ್ಫೂರ್ತಿ ಮೆರೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣ ಎಂದರು.
ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದರಿಂದ ಕ್ರೀಡಾಪಟು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ರೀಡೆಗೆ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರೋತ್ಸಾಹ-ನೆರವು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಕ್ಷೇತ್ರವು ಬಲಿಷ್ಠವಾಗಲು ಸಾಧ್ಯವಾಗಲಿದೆ. ಸರಕಾರಗಳು ಕ್ರೀಡಾಪಟುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡುತ್ತಿವೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ದೇವರಹಳ್ಳಿ ವೆಂಕಟೇಶ್, ಕುಮಾರ್, ಯುವ ಮುಖಂಡ ಪ್ರಜ್ವಲ್, ಡಿವಿ ಬಾಯ್ಸ ತಂಡದ ಅಮೀತ್, ರಾಜೇಶ್, ಅರುಣ್, ತೇಜಸ್, ಸಚ್ಚಿನ್, ಪವನ್, ಸಂತೋಷ, ಪ್ರಜ್ವಲ್, ಯಶ್ವಂತ್, ಶ್ರೇಯಸ್ ಇತರರು ಇದ್ದರು.