

ಕೆ.ಆರ್.ಪೇಟೆ : ವಿದ್ಯೆಯಿಂದ ಮನುಷ್ಯನ ಜ್ಞಾನ ವಿಕಾಸವಾದರೆ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಪಟ್ಟಣದ ಕೇಂಬ್ರಿಡ್ಜ್ ಶಾಲೆ ಆಯೋಜಿಸಿದ್ದ ಕಸಬಾ, ಶೀಳನೆರೆ ಹೋಬಳಿಯ 17ನೇ ವಯೋಮಿತಿಯ ಪ್ರೌಢಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪಠ್ಯ ಚಟುವಟಿಕೆಗಳ ಜತೆಗೆ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲಿದೆ. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ದೈಹಿಕ ಶಿಕ್ಷಕರು ಅರಿವು ಮೂಡಿಸುವ ಕೆಲಸ ಮಾಡುವ ಜತೆಗೆ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕು ಎಂದು ತಿಳಿಸಿದರು.
ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಚೆನ್ನಾಗಿ ಆಡುವವರು ಜಯ ಸಾಧಿಸುತ್ತಾರೆ. ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಬದಲಾಗಿ ಪಾಲ್ಗೊಳ್ಳುವ ಉತ್ಸುಕತೆ ಇರಬೇಕು. ಫಲಿತಾಂಶವನ್ನು ಸಮಾನ ಚಿತ್ತದಿಂದ ಸ್ವೀಕರಿಸಬೇಕು. ಸೋತವರು ಹಿಂಜರಿಯದೆ ಸತತ ಪ್ರಯತ್ನದಿಂದ ಗೆಲುವು ಸಾಧಿಸಬೇಕು. ಗೆದ್ದವರೊಂದಿಗೆ ಬೆರೆತು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಕ್ರೀಡೆಯಲ್ಲಿ ಪಾಲ್ಗೊಂಡಿರುವ ಎಲ್ಲ ಕ್ರೀಡಾಪಟುಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕೂಟವನ್ನು ಯಶಸ್ವಿಗೊಳಿಸಬೇಕು. ಸ್ವರ್ಧಾ ಮನೋಭಾವನೆಯಿಂದ ಆಟಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ಎಚ್.ಟಿ.ಮಂಜು ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಪಥ ಸಂಚಲನ ನಡೆಸಿದ ವಿದ್ಯಾರ್ಥಿಗಳಿಂದ ಗೌರವ ವಂದನೆ, ಜತೆಗೆ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.
ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಪ್ರಭುಕುಮಾರ್, ಫ್ರೌಡಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ರಾಜ್ಯ ಸರ್ಕಾರಿ ನೌಕರರ ನಿರ್ದೇಶಕ ಶ್ರೀನಿವಾಸ್, ಕೇಂಬ್ರಿಡ್ಜ್ ಶಾಲೆಯ ಮುಖ್ಯ ಶಿಕ್ಷಕಿ ರಾಹಿಲಾ ಬಾನು ಸೇರಿದಂತೆ ಹಲವರಿದ್ದರು.