

ಕೊಳ್ಳೇಗಾಲ: ಪ್ರತಿನಿತ್ಯ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಸಮತೋಲನ ಕಾಯ್ದುಕೊಳ್ಳಬೇಕೆಂದು ಶ್ರೀ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್‌ನ ಡಾ.ಬಸವರಾಜೇಂದ್ರ ಸಲಹೆ ನೀಡಿದರು.
ತಾಲೂಕಿನ ತಿಮ್ಮರಾಜಿಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಭಾನುವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಕೊಳ್ಳೇಗಾಲ, ಶ್ರೀ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಮರೆಯಾಲ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯು ಬದಲಾಗಿದೆ. ಹೆಚ್ಚು ಮೊಬೈಲ್, ಟಿವಿಗಳನ್ನು ನೋಡುವುದರಲ್ಲಿ ಸಮಯ ಕಳೆಯಲಾಗುತ್ತಿದೆ. ದೈಹಿಕ ಚಟುವಟಿಕೆಗೆ ಆದ್ಯತೆ ನೀಡದೆ ಇರುವುದರಿಂದ ಸಾಕಷ್ಟು ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಪ್ರಾಥಮಿಕ ಹಂತದಲ್ಲಿಯೇ ರೋಗಗಳ ಪತ್ತೆಯಾಗಲಿದ್ದು, ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಆಧುನಿಕತೆಯ ನಾಗಾಲೋಟದಲ್ಲಿ ಆರೋಗ್ಯದ ಕಾಳಜಿ ಮರೆಯದೆ ಸರ್ಕಾರದ ಆರೋಗ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಯಶಸ್ವಿನಿ ಇದರ ಯೋಜನೆಗಳ ಬಗ್ಗೆ ನಿಯಮಾನುಸಾರ ಕಾಲಕಾಲಕ್ಕೆ ನೋಂದಣಿ ಮತ್ತು ನವೀಕರಣ ಮಾಡಿಸಿಕೊಂಡು ಮಧ್ಯಮ ವರ್ಗದವರು ಯೋಜನೆಗಳ ಅನುಕೂಲ ಪಡೆಯಬೇಕೆಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಬಿ.ಎಸ್.ವಾಸು ಮಾತನಾಡಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಶ್ರೀಪತಿ ಅವರ ಮಾರ್ಗದರ್ಶನದಂತೆ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ ಅಧಿಕಾರಿಗಳು ರಕ್ತದಾನ ಮಾಡಿದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ 371 ಜನರಿಗೆ ರಕ್ತದೊತ್ತಡ, ಮಧುಮೇಹ ಇನ್ನಿತರ ರೋಗಗಳ ತಪಾಸಣೆಗಳು ನಡೆಸಲಾಯಿತು. ಉಚಿತವಾಗಿ ಔಷಧ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಳ್ಳೇಗಾಲ ವಲಯದ ವತಿಯಿಂದ ಒಟ್ಟು 53 ಜನರಿಗೆ ವಿವಿಧ ಯೋಜನೆಗಳಿಗೆ ಉಚಿತವಾಗಿ ನೋಂದಣಿ ಮಾಡಿಸಲಾಯಿತು. ವೈದ್ಯರು, ರೈತ ಮುಖಂಡರಿಗೆ ಅರಣ್ಯ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಶ್ವೇತಾ ಶಶಿಧರ್, ವಲಯ ಅರಣ್ಯ ಅಧಿಕಾರಿ ಬಿ.ಎಸ್.ವಾಸು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸಹನಪ್ರಿಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶೋಯಬ್ ಪಾಷಾ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಗಿರೀಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಳ್ಳೇಗಾಲ ತಾಲೂಕಿನ ನೋಡಲ್ ಅಧಿಕಾರಿ ನಾರಾಯಣ್, ಸಾವಯವ ಕೃಷಿಕ ಕುಣಗಳ್ಳಿ ರಂಗಸ್ವಾಮಿ, ಗಸ್ತು ವನಪಾಲಕ ಸಂಜುನಾಥ ಆಯಟ್ಟಿ, ಸುನೀಲ್ ಬಸಪ್ಪ ಬೆಳವಿ, ಎಸ್.ರಾಜು, ಅರಣ್ಯ ವೀಕ್ಷಕ ಮಹೇಶ್, ಸಿದ್ದರಾಮು ಮತ್ತಿತರಿದ್ದರು.