ರೈತರು ಪ್ರಶ್ನೆ ಮಾಡಿದರೆ ಸೊಸೈಟಿಗಳ ಸುಧಾರಣೆ ಸಾಧ್ಯ

23 UPBR 1
Published on

ಉಪ್ಪಿನಬೆಟಗೇರಿ: ಸಹಕಾರ ಸಂಘದ ಆಡಳಿತದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ರೈತರು ಪ್ರಶ್ನೆ ಮಾಡಿದಾಗ ಆಡಳಿತ ಸುಧಾರಿಸಿ, ಸಂಘವು ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಏಳು ವರ್ಷಗಳ ಹಿಂದೆ ಸಂಘ ಅಂದಾಜು 65 ಲಕ್ಷ ರೂ. ನಷ್ಟದಲ್ಲಿತ್ತು. ನಂತರ ಬಂದ ನಮ್ಮ ಆಡಳಿತ ಮಂಡಳಿಯು ತಮ್ಮೆಲ್ಲರ ಸಹಕಾರದಿಂದ ಎಲ್ಲ ನಷ್ಟವನ್ನು ಸರಿದೂಗಿಸಿ, 21 ಲಕ್ಷ ರೂ.ಲಾಭದತ್ತ ಮುನ್ನಡೆಯುತ್ತಿದೆ. ಹೀಗಾಗಿ ಈ ಬಾರಿ ಸಂಘದಲ್ಲಿ ಷೇರು ಹಣ ಹೊಂದಿರುವ ಪ್ರತಿಯೊಬ್ಬರಿಗೂ ಶೇ.18 ಡಿವಿಡೆಂಟ್ ನೀಡಲಿದ್ದೇವೆ ಎಂದರು.

ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಜಿ.ಆರ್. ಜವಳಗಿ ಮಾತನಾಡಿ, ಕಳೆದ ಹತ್ತು ವರ್ಷದ ಹಿಂದೆ ಸಾಕಷ್ಟು ನಷ್ಟದಲ್ಲಿದ್ದ ಸಂಘವನ್ನು ಈಗಿರುವ ಆಡಳಿತ ಮಂಡಳಿಯವರು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಸಂಘದಲ್ಲಿ ಅಂದಾಜು 40 ಲಕ್ಷ ರೂ.ಗಳಿಗೂ ಅಧಿಕ ಕಟಬಾಕಿ ಸಾಲಗಾರರಿದ್ದು, ಹಂತ ಹಂತವಾಗಿ ಮರುಪಾವತಿ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿ, ಅಲ್ಪ ಅವಧಿಯಲ್ಲಿಯೇ ಸಂಘವನ್ನು ಲಾಭದತ್ತ ಮುನ್ನಡೆಯುವಂತೆ ಮಾಡಿದ್ದಲ್ಲದೆ, ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಕಡಲೆ ಖರೀದಿ ಕೇಂದ್ರ ತೆರೆದು ಅನುಕೂಲ ಕಲ್ಪಿಸಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷ ವೀರಣ್ಣ ಪರಾಂಡೆ, ಸ್ಥಳೀಯ ಕೆಸಿಸಿ ಬ್ಯಾಂಕ್ ಮ್ಯಾನೇಜರ್ ಎಸ್.ಕೆ. ಪಾಟೀಲ ಮಾತನಾಡಿದರು. ರೈತರಾದ ರುದ್ರಪ್ಪ ಮಸೂತಿ, ಅಜೀತ ಛಬ್ಬಿ, ಜ್ಞಾನದೇವ ಮೋರಕಾರ, ನಿಂಗಪ್ಪ ದಿವಟಗಿ ಸೇರಿದಂತೆ ಹಲವರು ಸಂಘದ ಸಮಸ್ಯೆಗಳು, ಕಟಬಾಕಿ ವಸೂಲಿ, ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಣ್ಣ ಅಷ್ಟಗಿ, ಪಿಕೆಪಿಎಸ್ ನಿರ್ದೇಶಕರಾದ ಕಲ್ಲಯ್ಯ ವಿಭೂತಿಮಠ ಶಂಕರ ಪೂಜಾರ, ಧರೆಪ್ಪ ಬೊಬ್ಬಿ, ಉಮೇಶ ಮಸೂತಿ, ಈರಣ್ಣ ಮಡಿವಾಳರ, ಚಂದ್ರನಾಥ ಅಷ್ಟಗಿ, ಬಾಬಾ ಮೊಯಿನುದ್ದೀನ್ ಚೌಧರಿ, ನಿಂಗಪ್ಪ ಕೊಪ್ಪದ, ದೇವೇಂದ್ರ ಅಂಗಡಿ, ಕೆಸಿಸಿ ಬ್ಯಾಂಕ್ ಮ್ಯಾನೇಜರ್ ಎಸ್.ಕೆ. ಪಾಟೀಲ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಲ್ಲಪ್ಪ ಕಿತ್ತೂರ, ಮಹಮ್ಮದ ಸಲಿಂ ಖತೀಬ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net