ಹಳ್ಳಿ ಬೋಗಾದಿ ಬಡಾವಣೆಯಲ್ಲಿ ರಸ್ತೆಗಳ ಅಧ್ವಾನ

mysore
Published on

ಮೈಸೂರು: ನಗರದ ಕೆಲವು ಪ್ರಮುಖ ರಸ್ತೆಗಳು ಡಾಂಬರೀಕರಣದಿಂದ ಕಂಗೊಳಿಸುತ್ತಿದ್ದರೆ, ಕೆಲ ಬಡಾವಣೆಗಳ ರಸ್ತೆಗಳು ಮಾತ್ರ ಹೊಂಡ, ಗುಂಡಿಗಳಾಗಿ ಸಂಚರಿಸಲೂ ಆಗದ ದುಸ್ಥಿತಿಯಲ್ಲಿವೆ.


ಅಂತಹ ರಸ್ತೆಗಳಲ್ಲಿ ಹಳ್ಳಿ ಬೋಗಾದಿಯ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದ ರಸ್ತೆ ( ಸಾಯಿ ಸರಸ್ವತಿ ಶಾಲೆಯ ಹಿಂದಿನ 30 ಅಡಿ ಅಗಲದ 300 ಅಡಿ ಉದ್ದದ ರಸ್ತೆ) ಅದರಲ್ಲಿ ಒಂದು.


ಈ ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಇಕ್ಕಟ್ಟಾದ ಕಿರಿದಾದ ಈ ರಸ್ತೆಯಲ್ಲಿ ಗುಂಡಿ ತಪ್ಪಿಸಿ ಸಂಚರಿಸುವುದು ಕಷ್ಟಕರ. ಬೇಸಿಗೆ ಕಾಲದಲ್ಲಿ ಧೂಳುಮಯವಾಗುವ ಈ ರಸ್ತೆ, ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ.


ತಾಲೂಕು ಆಡಳಿತಕ್ಕೆ ಒಳಪಡುವ ಈ ಚಿಕ್ಕ ರಸ್ತೆ ಈವರೆಗೆ ಡಾಂಬರ್ ಭಾಗ್ಯವನ್ನೇ ಕಂಡಿಲ್ಲ. ಸುತ್ತಮುತ್ತಲ ಪ್ರಮುಖ ರಸ್ತೆಗಳು, ಅಡ್ಡ ರಸ್ತೆಗಳಿಗೆ ಡಾಂಬರ್ ಹಾಕಿದ್ದು, ಈ ರಸ್ತೆ ಡಾಂಬರ್ ಹಾಕುವುದನ್ನು ಮರೆತಂತಿದೆ. ಜನ ವಸತಿ ಪ್ರದೇಶವಲ್ಲದೆ, ಸಿದ್ಧರಾಮೇಶ್ವರ ಕಲ್ಯಾಣ ಮಂಟಪ ಇರುವುದರಿಂದ ಇಲ್ಲಿ ನಿತ್ಯವೂ ಜನ, ವಾಹನಗಳ ಸಂಚಾರ ಹೆಚ್ಚಾಗಿಯೇ ಇರುತ್ತದೆ. ಸಂಬಂಧಿಸಿದವರು ಈ ರಸ್ತೆಯ ಗುಂಡಿ, ಹೊಂಡಗಳನ್ನು ಮುಚ್ಚಿ ಡಾಂಬರ್ ಹಾಕಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡಬೇಕಿದೆ.


ಮನೆ ನಿರ್ಮಿಸುತ್ತಿರುವ ಬಡಾವಣೆಯ ಕೆಲವರು ರಸ್ತೆಯಲ್ಲೇ ಜಲ್ಲಿ, ಸಿಮೆಂಟ್ ಹಾಕಿಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ.


ಅನುದಾನ ಬಂದರೆ ದುರಸ್ತಿ:

ರಸ್ತೆ ಹದಗೆಟ್ಟಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸದ್ಯದಲ್ಲಿಯೇ ಅನುದಾನ ಬಂದರೆ ದುರಸ್ತಿ ಮಾಡುವುದಾಗಿ ಬೋಗಾದಿ ಗ್ರಾಮ ಪಂಚಾಯಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ರಸ್ತೆ ದುಸ್ಥಿತಿಯಲ್ಲಿದ್ದು, ಮಳೆಗಾಲ ಆರಂಭವಾದರೆ ಮತ್ತಷ್ಟು ಅಧ್ವಾನವಾಗಲಿದೆ. ಅಕ್ಕಪಕ್ಕದ ರಸ್ತೆಗಳು ಸಿಮೆಂಟ್ ಮತ್ತು ಡಾಂಬರ್ ರಸ್ತೆಗಳಾಗಿವೆ. ನಮ್ಮ ರಸ್ತೆಗೆ ಮಾತ್ರ ತಾರತಮ್ಯ ಧೋರಣೆ ತೋರಲಾಗುತ್ತಿದೆ. ಸಂಬಂಧಿಸಿದವರು ಗುಂಡಿ ಬಿದ್ದಿರುವ ರಸ್ತೆಗೆ ತಕ್ಷಣವೇ ಸಿಮೆಂಟ್ ಅಥವಾ ಡಾಂಬರು ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಿ.ಜಿ.ವೆಂಕಟಾಚಲ ಬಡಾವಣೆಯ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net