ಅಸಮರ್ಪಕ ತ್ಯಾಜ್ಯ ವಿಲೇವಾರಿ

waste
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮೀನುಗಾರಿಕಾ ಬಂದರು ಪ್ರದೇಶದ ಸಮೀಪವಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಗಂಗೊಳ್ಳಿ ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ತ್ಯಾಜ್ಯಗಳು ತುಂಬಿದ್ದು, ಸಾಂಕ್ರಾಮಿಕ ರೋಗ ಉತ್ಪನ್ನ ತಾಣವಾಗಿ ರೂಪುಗೊಳ್ಳುತ್ತಿದೆ. ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ತ್ಯಾಜ್ಯಗಳು ಕೊಳೆತು ನಾರುತ್ತಿದ್ದು, ಸುತ್ತ್ತಲಿನ ಪರಿಸರ ಗಬ್ಬುವಾಸನೆ ಬೀರುತ್ತಿದೆ. ದನ, ನಾಯಿ ಮುಂತಾದ ಪ್ರಾಣಿ ಪಕ್ಷಿಗಳು ತ್ಯಾಜ್ಯ ತಿನ್ನುತ್ತಿದ್ದು, ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯೂ ಇದೆ. ಗಂಗೊಳ್ಳಿಯಲ್ಲಿ ಅಪರೂಪಕ್ಕೆ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಘಟಕದಲ್ಲಿ ಸ್ಥಳಾವಕಾಶದ ಕೊರತೆಯಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ಕಾಂಪೋಸ್ಟ್ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ಅದನ್ನು ತೆಗೆಯುವ ಕೆಲಸ ನಡೆಯುತ್ತಿಲ್ಲ. ತ್ಯಾಜ್ಯ ಸಂಗ್ರಹಣೆಗೆ ಯಂತ್ರ ಅಳವಡಿಸಿದ್ದರೂ ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಇಲ್ಲದೆ ಘಟಕದಲ್ಲಿ ತ್ಯಾಜ್ಯದ ರಾಶಿ ತುಂಬಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಘಟಕದ ಸುತ್ತಲೂ ಹರಡಿದ್ದ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿತ್ತು. ಈಗ ಮತ್ತೆ ತ್ಯಾಜ್ಯ ತುಂಬಿದ್ದು, ನಿರ್ವಹಣೆ ಮಾಡಲಾಗುತ್ತಿಲ್ಲ. ಗಂಗೊಳ್ಳಿ ಜನತೆ ಸ್ಥಳೀಯ ಆಡಳಿತ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ಸಮಸ್ಯೆ ನಿವಾರಣೆಗೆ ಪಟ್ಟು ಹಿಡಿದಿದ್ದಾರೆ.

ಮೂರು ವರ್ಷಗಳಿಂದ ಇಲ್ಲಿನ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆಯನ್ನು ಖಾಸಗಿ ಎನ್‌ಜಿಒ ಸಂಸ್ಥೆ ಟಿಪ್ಸ್‌ಗೆ ವಹಿಸಲಾಗಿದೆ. ಪ್ರತಿನಿತ್ಯ ಸುಮಾರು 1,300ಕ್ಕೂ ಹೆಚ್ಚು ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿತ್ತು. ತ್ಯಾಜ್ಯ ಸಂಗ್ರಹ ಕಾರ್ಯ ಸರಿಯಾಗಿ ನಡೆಯದೆ ಇರುವುದರಿಂದ ಜನರು ರಸ್ತೆಯ ಬದಿಗಳಲ್ಲಿ, ಚರಂಡಿಗಳಲ್ಲಿ, ಕೆರೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅಸಮರ್ಪಕ ನಿರ್ವಹಣೆಯಿಂದ ಘನ ಮತ್ತು ದ್ರವ ಸಂಪನ್ಮೂಲ ಘಟಕ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ.

ಘನ ಮತ್ತು ದ್ರವ ಸಂಪನ್ಮೂಲ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ತ್ಯಾಜ್ಯಗಳು ತುಂಬಿ ತುಳುಕಾಡುತ್ತಿದ್ದು, ಸಾಂಕ್ರಾಮಿಕ ರೋಗ ಉತ್ಪನ್ನ ತಾಣವಾಗಿ ರೂಪುಗೊಳ್ಳುತ್ತಿದೆ. ತ್ಯಾಜ್ಯ ಸಮಸ್ಯೆ ಪರಿಹಾರ ಮಾಡಲೆಂದು ಆರಂಭಿಸಲಾದ ಎಸ್‌ಎಲ್‌ಆರ್‌ಎಂ ಘಟಕವೇ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ. ಸ್ಥಳೀಯಾಡಳಿತ ಸಮಸ್ಯೆಯ ಗಂಭೀರತೆ ಅರಿತು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು -ನವೀನ್ ಗಂಗೊಳ್ಳಿ ಸಾಮಾಜಿಕ ಕಾರ್ಯಕರ್ತ https://www.vijayavani.net/brahmarathotsava-at-gangolli-temple https://www.vijayavani.net/our-countrys-culture-is-a-model-for-the-world

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net