ಅಸಮರ್ಪಕ ವಿದ್ಯುತ್ ಕಂಬ ಅಳವಡಿಕೆ

Sul_electric-pole
Published on

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮ ಕಾಂತಮಂಗಲದ ಹನಿಯಡ್ಕ ಭಾಗದಲ್ಲಿ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ಕಂಬ ಅಳವಡಿಸಿದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾದ ಘಟನೆ ನಡೆದಿದೆ.

ಸುಳ್ಯನಗರ ವ್ಯಾಪ್ತಿಯಿಂದ ಕಾಂತಮಂಗಲಕ್ಕೆ ವಿದ್ಯುತ್‌ಲೈನ್ ಎಳೆಯಲಾಗುತ್ತಿದ್ದು ರಸ್ತೆಯ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ಕಂಬ ಅಳವಡಿಸಲಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತದೆ ಎಂದು ಮನಗಂಡ ಸ್ಥಳೀಯರು ಸಮರ್ಪಕ ಕಂಬ ಅಳವಡಿಕೆಗೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರು. ಸ್ಥಳಕ್ಕೆ ಬಂದ ಮೆಸ್ಕಾಂ ಅಧಿಕಾರಿಗಳು ಜನರ ಆಕ್ಷೇಪದ ಮೇರೆಗೆ ಕೆಲಸ ಸ್ಥಗಿತಗೊಳಿಸುವಂತೆ ತಿಳಿಸಿದರು.

ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಯಾಗಿದೆ. ವಿದ್ಯುತ್ ಕಂಬ ಅಳವಡಿಸಿದರೆ ಸಮಸ್ಯೆಯಾಗುತ್ತದೆ. ಕಂಬ ಅಳವಡಿಕೆಗೆ ನಮ್ಮ ಆಕ್ಷೇಪವಲ್ಲ. ಆದರೆ ಜನರಿಗೆ ತೊಂದರೆಯಾಗುವಂತೆ ಅಳವಡಿಕೆ ಸರಿಯಲ್ಲ ಎಂದು ಅಧಿಕಾರಿಗಳೊಂದಿಗೆ ಸ್ಥಳೀಯರು ತಿಳಿಸಿದರು.

ಸ್ಥಳೀಯರಾದ ಸತೀಶ್ ಬೂಡುಮಕ್ಕಿ, ಸತೀಶ್ ಅತ್ಯಡ್ಕ, ಮಂಜುನಾಥ್ ಕಾತಮಂಗಲ, ಕುಶಲ ಹನಿಯಡ್ಕ, ಸುಬ್ಬಯ್ಯ ಬಸವನಪಾದೆ, ಶರತ್ ಅತ್ಯಡ್ಕ, ಚಿದಾನಂದ ಬಸವನಪಾದೆ, ಪರಮೇಶ್ವರ್ ಬಸವನಪಾದೆ, ತಾರಾನಾಥ ಅತ್ಯಡ್ಕ, ದಿವಾಕರ ಹನಿಯಡ್ಕ, ಉದಯ ಬಸವನಪಾದೆ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net