ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಛಾಪು

h24-murusavirmath
Published on

ಹುಬ್ಬಳ್ಳಿ: ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ. ಈ ಭೂಮಿ ಮೇಲೆ ಪ್ರಥಮವಾಗಿ ವ್ಯವಸಾಯ ಮಾಡಿದ್ದು ಮಹಿಳೆ. ಇದಕ್ಕೆ ಕಾರಣ ಮಹಿಳೆ ಸಹನಾಶೀಲೆ, ಕಾಯಕನಿಷ್ಠಳು ಎಂದು ರಾಯಚೂರಿನ ಪ್ರಗತಿಪರ ಕೃಷಿ ಮಹಿಳೆ ಡಾ. ಕವಿತಾ ಮಿಶ್ರಾ ಅಭಿಪ್ರಾಯಿಸಿದರು.

ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಹಿಳೆಯು ಯಾವ ಪುರುಷರಿಗೂ ಕಡಿಮೆಯಿಲ್ಲದೆ ಸಾಧನೆಯನ್ನು ಮಾಡುತ್ತಿದ್ದಾಳೆ. ಹೀಗಾಗಿ ಯಾವುದೇ ಉದ್ಯೋಗವನ್ನು ಪ್ರೀತಿ ಹಾಗೂ ವಿಶ್ವಾಸದಿಂದ ಮಾಡುವುದರ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾಳೆ ಎಂದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತೆ ದಾನಮ್ಮ ಚಿಚಕಂಡಿ ಮಾತನಾಡಿ, ಹೆಣ್ಣುಮಕ್ಕಳು ಶಾಲಾ ಹಂತದಲ್ಲಿಯೇೕ ಭವಿಷ್ಯದಲ್ಲಿ ತಾನು ಏನಾಗಬೇಕೆಂದು ನಿರ್ಧರಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ತಯಾರಿ ಮಾಡಿಕೊಂಡು ಕಾರ್ಯೋನ್ಮುಖವಾಗಬೇಕು. ಆವಾಗಲೇ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದರು.

ಮೂರುಸಾವಿರಮಠದ ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರು ಮನೆ, ಸಮಾಜ, ಕೃಷಿ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. ಇದಕ್ಕೆ ಅವರಲ್ಲಿರುವ ತಾಳ್ಮೆ ಶಕ್ತಿ ಕಾರಣ ಎಂದರು.

ಎಸ್​ಜೆಎಂವಿ ಸಂಘದ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಅಧ್ಯಯನ-ಅಧ್ಯಾಪನದಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಭವಿಷ್ಯದ ಉಜ್ವಲ ಪ್ರಜೆಗಳನ್ನು ರೂಪಿಸಲು ಸಾಧ್ಯವೆಂದರು.

ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್ ವಾರ್ಷಿಕ ವರದಿ ಓದಿದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಎಸ್​ಜೆಎಂವಿ ಸಂಘದ ಸದಸ್ಯ ಸದಾನಂದ ಡಂಗನವರ, ಲಿಂಗರಾಜ ಇಂಗಳಹಳ್ಳಿ, ಐಕ್ಯೂಎಸಿ ಸಂಚಾಲಕ ಶಿವಕುಮಾರ ಬನ್ನಿಹಟ್ಟಿ, ಡಾ. ಗುರುರಾಜ ನವಲಗುಂದ, ವಿದ್ಯಾರ್ಥಿನಿ ಪ್ರತಿನಿಧಿಗಳಾದ ವೈಷ್ಣವಿ ಕುಲಕರ್ಣಿ, ರಿತಿಕಾ ಬುರೆ, ಸುರಭಿ ರಾಯಚೂರು, ರೂಪಾ ಕಡಗಾವಿ ಉಪಸ್ಥಿತರಿದ್ದರು. ತಾಯಣ್ಣ ಸ್ವಾಗತಿಸಿದರು. ಸುಪ್ರಿಯಾ ಮಲಶೆಟ್ಟಿ ನಿರ್ವಹಿಸಿದರು. ಜೋತಿಲಕ್ಷ್ಮೀ ಡಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net