ಮೈಸೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ

ಆರ್‌ಎಸ್‌ಎಸ್ ವತಿಯಿಂದ ವಿಜಯದಶಮಿ ಪ್ರಯುಕ್ತ ಭಾನುವಾರ ಮೈಸೂರು ನಗರದಲ್ಲಿ ಭಾನುವಾರ ಪಥಸಂಚಲನ ನಡೆಯಿತು.
ಆರ್‌ಎಸ್‌ಎಸ್ ವತಿಯಿಂದ ವಿಜಯದಶಮಿ ಪ್ರಯುಕ್ತ ಭಾನುವಾರ ಮೈಸೂರು ನಗರದಲ್ಲಿ ಭಾನುವಾರ ಪಥಸಂಚಲನ ನಡೆಯಿತು.
Published on: 

ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ವಿಜಯದಶಮಿ ಪ್ರಯುಕ್ತ ಭಾನುವಾರ ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.

ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಿಂದ ಆರಂಭಗೊಂಡ ಪಥಸಂಚಲನದಲ್ಲಿ ಆರ್‌ಎಸ್‌ಎಸ್‌ನ ಸ್ವಯಂಸೇವಕರು ಶಿಸ್ತಿನಿಂದ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಸಂಘದ ಸಾಂಪ್ರದಾಯಿಕ ವೇಷಭೂಷಣ ಧರಿಸಿದ್ದ ಸ್ವಯಂಸೇವಕರು ಸಾಲಾಗಿ ಸಾಗುತ್ತಿದ್ದ ದೃಶ್ಯ ಪಥಸಂಚಲನದ ಆಕರ್ಷಣೆಯಾಗಿತ್ತು.

ಭೂತಾಳೆ ಮೈದಾನದಿಂದ ಆರಂಭವಾದ ಪಥಸಂಚಲನವು ಸೂಯೇಜ್‌ಫಾರ್ಮ್ ರಸ್ತೆ, 19ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಅಂದಾನಿ ವೃತ್ತ, ವಿದ್ಯಾರಣ್ಯಪುರಂ 2ನೇ ಮುಖ್ಯ ರಸ್ತೆ, ಚಾಮುಂಡಿಪುರಂ ವೃತ್ತ, ಜೆಎಲ್‌ಬಿ ರಸ್ತೆ, ಸೂಯೇಜ್‌ಫಾರ್ಮ್ ರಸ್ತೆ ಹಾಗೂ ಕರುಮಾರಿಯಮ್ಮ ದೇವಸ್ಥಾನದ ಮುಂಭಾಗದ ರಸ್ತೆ ಮೂಲಕ ಸಾಗಿತು. ಬಳಿಕ 2ನೇ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಮತ್ತೆ ಭೂತಾಳೆ ಮೈದಾನ ತಲುಪುವ ಮೂಲಕ ಪಥಸಂಚಲನ ಮುಕ್ತಾಯಗೊಂಡಿತು.

ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಹೂವುಗಳನ್ನು ಎರಚುವ ಮೂಲಕ ಗೌರವ ಸಲ್ಲಿಸಿದರು. ಪಥಸಂಚಲನ ಸಾಗುತ್ತಿದ್ದಂತೆ ಹೂವಿನ ಮಳೆ ಸುರಿದಿದ್ದು, ಮಾರ್ಗದುದ್ದಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ವಿಜಯದಶಮಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪಥಸಂಚಲನವು ಸಂಘದ ಶಿಸ್ತು, ಸಂಘಟನಾ ಸಾಮರ್ಥ್ಯ ಹಾಗೂ ಸಾಮೂಹಿಕ ಭಾಗವಹಿಸುವಿಕೆಯನ್ನು ಪ್ರದರ್ಶಿಸಿತು. ವಿವಿಧ ವೃತ್ತಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥಸಂಚಲನವನ್ನು ಸಾರ್ವಜನಿಕರು ವೀಕ್ಷಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಆರ್‌ಎಸ್‌ಎಸ್‌ನ ನಗರ ಸಂಘಚಾಲಕ ವಾಸುದೇವ ಭಟ್, ಮೈಸೂರು ವಿಭಾಗೀಯ ಪ್ರಚಾರಕ ಅನಂತಕೃಷ್ಣ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net