

ಕಲಬುರಗಿ: ಅತಿ ದೇಹ ತೂಕ, ಎದೆಹಾಲಿನ ಕೊರತೆ, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ, ಬೇಗ ಋತುಮತಿ, ಮಕ್ಕಳಿಗೆ ಸಕ್ಕರೆ ಕಾಯಿಲೆ, ಕ್ಯಾನ್ಸರ್‌ನಂತ ಗಂಭೀರ ಸಮಸ್ಯೆಗಳಿಗೆ ರಸಾಯನಿಕಯುಕ್ತ ಆಹಾರವೇ ಕಾರಣ ಎಂದು ಆಹಾರ ಮತ್ತು ಔಷಧ ವಿಜ್ಞಾನಿ ಡಾ.ಶ್ರೀಶೈಲ ಬದಾಮಿ ಹೇಳಿದರು.
ನಗರದ ಸ್ವಾಭಿಮಾನ ಸ್ವದೇಶಿ ಕೇಂದ್ರದಲ್ಲಿ ಸ್ವದೇಶಿ ಚಿಂತನೆಗಳು ಸರಣಿಯಲ್ಲಿ ಭಾನುವಾರ ಏರ್ಪಡಿಸಿದ್ದ `ಮನುಕುಲಕ್ಕೆ ಮಾರಕ ರಾಸಾಯನಿಕ ಕೀಟನಾಶಕ' ಕುರಿತು ಉಪನ್ಯಾಸ ನೀಡಿದ ಅವರು, ರೋಗಮುಕ್ತ ಜೀವನಕ್ಕೆ ಸಾವಯವ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಅಡುಗೆ ಮನೆಯಲ್ಲಿ ನಾವು ಯಥೇಚ್ಛವಾಗಿ ಬಳಸುವ ರಾಸಾಯನಿಕ ಯುಕ್ತ ರಿಫಾಯಿನ್ಡ್ ಎಣ್ಣೆ, ಮೈದಾ, ಬಿಳಿ ಸಕ್ಕರೆ, ಬಿಳಿ ಉಪ್ಪು, ಡೈರಿ ಹಾಲು, ಚಹಾ, ಕಾಫಿಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಗಾಣದ ಎಣ್ಣೆ, ಸಾವಯವ ಬೆಲ್ಲ, ಸೈಂದವ ಲವಣ, ದೇಸಿ ಆಕಳ ಹಾಲು ಹಾಗೂ ಕಷಾಯಗಳನ್ನು ಬಳಸಬೇಕು. ಆರ್‌ಒ ನೀರು ಮತ್ತು ಪ್ಲಾಸ್ಟಿಕ್‌ನಲ್ಲಿರುವ ನೀರಿನ ಅನಾಹುತ ಅಪಾರ ಎಂದು ಎಚ್ಚರಿಕೆ ನೀಡಿದರು.