ಶಾರೀರಿಕ ಆರೋಗ್ಯ ಕಾಪಾಡಲು ಮುಖ್ಯ ಪಾತ್ರ

21.Pyp. 01
ಪಿರಿಯಾಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಚಾಲನೆ ನೀಡಿದರು. ನ್ಯಾಯಾಧೀಶರಾದ ಎಂ.ಆರ್.ಯೋಗೇಶ್, ಜೆ.ಶ್ವೇತಾ, ಸಹಾಯಕ ಸರ್ಕಾರಿ ಅಭಿಯೋಜಕ ಆರ್.ಕೆ.ಶ್ರೀನಾಥ್ ಇತರರು ಇದ್ದರು.
Published on

ಪಿರಿಯಾಪಟ್ಟಣ :  ದೈನಂದಿನ ಚಟುವಟಿಕೆಯೊಂದಿಗೆ ಯೋಗಭ್ಯಾಸವನ್ನು ಕಡ್ಡಾಯವಾಗಿ ಅಳವಡಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವರ್ಷಕ್ಕೆ ಒಮ್ಮೆ ಯೋಗ ದಿನಾಚರಣೆಯಲ್ಲಿ ನಾವು ಪಾಲ್ಗೊಂಡರೆ ಸಾಲದು. ಪ್ರತಿದಿನವೂ ನಾವು ಯೋಗ ಮಾಡಬೇಕು ಎಂದರು. ಯೋಗ ಎನ್ನುವುದು ಒಂದು ತಪಸ್ಸು ಇದ್ದಂತೆ. ಯೋಗ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ನಮಗೆ ಮಾನಸಿಕ ಸ್ಥಿಮಿತ ಮತ್ತು ಶಾರೀರಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಯೋಗಾಭ್ಯಾಸ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಹಿಂದೆ ಕೇವಲ ಭಾರತದಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಈ ಯೋಗವು ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದು ಮಾನವನ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ಉತ್ಪತ್ತಿ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಯೋಗವು ನಮ್ಮ ಪುರಾತನ ಪರಂಪರೆಯಿಂದ ದೊರೆತ ಅಮೂಲ್ಯವಾದ ಉಡುಗೊರೆಯಾಗಿದೆ. ದೇಹ ಮತ್ತು ಮನಸ್ಸಿನ ಏಕತೆ, ಚಿಂತನೆ ಮತ್ತು ಕ್ರಿಯಾ ಸಮ್ಮಿಲನವನ್ನು ಪ್ರತಿಬಿಂಬಿಸುತ್ತದೆ. ನಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊಡೆದೊಡಿಸಬಹುದು ನಮ್ಮ ದೇಹದ ಸೂಕ್ಷ್ಮ ಶಕ್ತಿಯು ಪ್ರಕರಗೊಳ್ಳಲು ಸಹಕಾರಿ ಎಂದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಂ.ಆರ್.ಯೋಗೇಶ್, ಜೆ.ಶ್ವೇತಾ, ಸಹಾಯಕ ಸರ್ಕಾರಿ ಅಭಿಯೋಜಕ ಆರ್.ಕೆ.ಶ್ರೀನಾಥ್, ಪೊಲೀಸ್ ವೃತ್ತ ನಿರೀಕ್ಷಕ ಗೋವಿಂದರಾಜ್, ವಕೀಲರ ಸಂಘದ ಅಧ್ಯಕ್ಷರಾದ ಧನಪಾಲ್, ವಕೀಲರಾದ ವಿಜಯ್ ಕುಮಾರ್, ಎಂ.ಜೆ.ಸ್ವಾಮಿ, ಎಂ.ಸಿ.ಹರೀಶ್, ಶಂಕರ, ಚಂದ್ರೇಗೌಡ, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net