ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ಲಾೃನ್: ಜಲಸಂಪನ್ಮೂಲ ಸಚಿವ ಡಿಕೆಶಿ ನೇತೃತ್ವದಲ್ಲಿ ಮಹತ್ವದ ಸಭೆ

Important meeting on irrigation scheme Mandya
Published on

ಮಂಡ್ಯ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು.
ಬೆಂಗಳೂರಿನ ವಿಧಾನಸೌಧದಲ್ಲಿ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಇನ್ನು ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಯೋಜನೆಗಳ ಬಗ್ಗೆ ವಿವರಿಸಿದರು. ಅದರಂತೆ ಪ್ರಮುಖವಾಗಿ ಶ್ರೀರಂಗಪಟ್ಟಣ ತಾಲೂಕು ಶ್ರೀನಿವಾಸ ಅಗ್ರಹಾರದಿಂದ ಮೇಲ್ದಂಡೆ ನಾಲಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಮೂಲಕ ಅತಿವೃಷ್ಠಿ ಸಮಯದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಅಪಾರ ಪ್ರಮಾಣದ ನೀರನ್ನು ಬಳಸಿಕೊಂಡು ಒಣ ಪ್ರದೇಶಕ್ಕೆ ಪೂರೈಕೆ ಮಾಡುವುದು.
ಮೇಲ್ದಂಡೆ ನಾಲಾ ಯೋಜನೆಯಡಿ ಮಾರ್ಕೋನಹಳ್ಳಿ ಡ್ಯಾಂ, ಕುಣಿಗಲ್, ಮಾಗಡಿ, ರಾಮನಗರ, ಚನ್ನಪಟ್ಟಣ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಆದ್ಯತೆ ಮೇರೆಗೆ ಯೋಜನೆ ಜಾರಿಗೊಳಿಸಲು ಚರ್ಚಿಸಲಾಯಿತು. ಇದಲ್ಲದೆ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ ಮದ್ದೂರು ತಾಲೂಕಿ ಕೊಪ್ಪ, ಮಳವಳ್ಳಿ ತಾಲೂಕಿನ ಕಸಬಾ ಮತ್ತು ಹಲಗೂರು ಭಾಗಕ್ಕೆ ನೀರು ತಲುಪಿಸುವುದು. ಇದಕ್ಕೆ ಪೂರಕವಾಗಿ ಆದ್ಯತೆ ಮೇರೆಗೆ ಎಲ್ಲ ಹಂತದ ನಾಲೆಗಳನ್ನು ಆಧುನೀಕರಣಗೊಳಿಸುವುದು. ಇನ್ನು ಹೇಮಾವತಿ ಅಣೆಕಟ್ಟೆ ವ್ಯಾಪ್ತಿಯ ಕೆ.ಆರ್.ಪೇಟೆ, ಮಂಡ್ಯ ತಾಲೂಕಿನ ಬಸರಾಳು ಹಾಗೂ ನಾಗಮಂಗಲ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ವಿಚಾರದ ಚರ್ಚೆ ನಡೆಯಿತು.
ಶಾಸಕರಾದ ಕೆ.ಎಂ.ಉದಯ್, ರವಿಕುಮಾರ್ ಗಣಿಗ, ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ವಿವೇಕಾನಂದ ಇದ್ದರು.

ರಕ್ಷಣಾ ಗೋಡೆ ನಿರ್ಮಾಣ
ನಾಲಾ ವ್ಯಾಪ್ತಿಯಲ್ಲಿ ನಡೆಯುವ ಅವಘಡ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಚರ್ಚೆ ನಡೆಯಿತು. ಪ್ರಮುಖವಾಗಿ ನಾಲಾ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿಪಡಿಸುವ ಜತೆಗೆ ರಕ್ಷಣಾ ಗೋಡೆ ನಿರ್ಮಾಣ ಮಾಡುವುದು. ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ಕೆರೆ ಹಾಗೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು. ಇದರೊಟ್ಟಿಗೆ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರಮುಖ ನೀರಾವರಿ ಯೋಜನೆ, ಬೇಡಿಕೆ, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳು, ಮಂಜೂರಾತಿ, ನಿರೀಕ್ಷೆ ಪಟ್ಟಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಡೆದುಕೊಂಡರು.

ಅತಿವೃಷ್ಠಿ ಸಂದರ್ಭದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಮೇಲ್ದಂಡೆ ನಾಲಾ ಯೋಜನೆಯಡಿ ಒಣ ಪ್ರದೇಶಕ್ಕೆ ಹರಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಹೇಮಾವತಿ ನದಿ ನೀರಿನ ಸದ್ಭಳಕೆಗೆ ಒತ್ತು ನೀಡಿ ಕೊನೆ ಭಾಗಕ್ಕೆ ನೀರೊದಗಿಸಲು ಕ್ರಮ ವಹಿಸುವಂತೆ ಆದೇಶಿಸಲಾಗಿದೆ.ಎನ್.ಚಲುವರಾಯಸ್ವಾಮಿಜಿಲ್ಲಾ ಉಸ್ತುವಾರಿ ಸಚಿವ ಕನ್ನಂಬಾಡಿ ಅಣೆಕಟ್ಟೆ ವ್ಯಾಪ್ತಿಯ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಲು ಕೈಗೆತ್ತಿಕೊಳ್ಳಬೇಕಾದ ನಾಲಾ ಆಧುನೀಕರಣಕ್ಕೆ ಆದ್ಯತೆ ನೀಡುವುದು. ಹಾಗೂ ಅಣೆಕಟ್ಟೆ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.ಪಿ.ಎಂ.ನರೇಂದ್ರಸ್ವಾಮಿಮಳವಳ್ಳಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net