ಅಡಕೆ ಪರವಾಗಿ ದೆಹಲಿಯಲ್ಲಿ ಮಹತ್ವದ ಸಭೆ

BYR
ಅಡಕೆಗೆ ಸಂಬಂಧಿಸಿದಂತೆ ಶಿವರಾಜ್ ಸಿಂಗ್ ಚೌವಾಣ್ ಅವರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಲ್ಹಾದ ಜೋಶಿ, ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಂತಾದವರು ಭಾಗವಹಿಸಿದ್ದರು.
Published on

ಶಿವಮೊಗ್ಗ: ರಾಜ್ಯದ ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಗುರುವಾರ ದೆಹಲಿಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಹಾಗೂ ವಿ.ಸೋಮಣ್ಣ ರಾಜ್ಯ ಸಂಸದರ ನಿಯೋಗಕ್ಕೆ ಸಾಥ್ ನೀಡಿದರು.

ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಡಾ.ಪ್ರಭಾ ಮಲ್ಲಿಕಾರ್ಜುನ್, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ ಕ್ಯಾಪ್ಟನ್ ಬ್ರಿಜೇಶ್ ಚೌಟ, ಯಧುವೀರ ಒಡೆಯರ್, ಶಾಸಕ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕೊಡ್ಗಿ ಮುಂತಾದವರು ನಿಯೋಗದಲ್ಲಿದ್ದರು.

ಅಡಕೆ ಹಾಗೂ ಅಡಕೆಯ ಉತ್ಪನ್ನಗಳ ಮೇಲೆ ಜಾಗತೀಕವಾಗಿ ಹಾಗೂ ಸ್ಥಳೀಯವಾಗಿ ಉಂಟಾಗುತ್ತಿರುವ 11 ಸಮಸ್ಯೆಗಳನ್ನು ಕೃಷಿ ಸಚಿವರ ಗಮನಕ್ಕೆ ತರಲಾಯಿತು. ಇದಕ್ಕೆ ಪರಿಹಾರ ಒದಗಿಸುವಂತೆ ಕ್ಯಾಂಪ್ಕೊ ಪರವಾಗಿ ಮನವಿ ಸಲ್ಲಿಸಲಾಯಿತು. ಅಮೆರಿಕದಲ್ಲಿ ಅಡಕೆ ಹಾಳೆಯ ಉತ್ಪನ್ನಗಳನ್ನು ನಿಷೇಧಿಸಿರುವುದರಿಂದ ಅನೇಕ ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಂಡೊಕೊಳ್ಳಬೇಕೆಂದು ಆಗ್ರಹಿಸಿಲಾಯಿತು.

ಅಡಕೆಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯಾಗಬೇಕು. ಮಳೆ ಪ್ರಮಾಣವನ್ನು ನಿಖರವಾಗಿ ಅಳತೆ ಮಾಡಲು ಅಗತ್ಯ ಸಾಧನಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಳವಡಿಸಬೇಕು. ಪ್ರಾಕೃತಿಕ ವಿಕೋಪ ಹಾಗೂ ರೋಗಗಳಿಂದ ಬೆಳೆ ನಷ್ಟವಾದರೆ ತ್ವರಿತವಾಗಿ ವಿಮೆ ಪರಿಹಾರ ನೀಡುವಂತೆ ಯೋಜನೆ ಸಿದ್ಧಪಡಿಸಬೇಕು. ಆ ಮೂಲಕ ಬೆಳೆ ವಿಮೆ ವ್ಯವಸ್ಥೆಗೆ ಬಲ ತುಂಬಬೇಕೆಂದು ಒತ್ತಾಯಿಸಲಾಯಿತು.

ಅಡಕೆ ಸಂಗ್ರಹಣಾ ವ್ಯವಸ್ಥೆಗೆ ಗೋದಾಮುಗಳ ಕೊರತೆ ಎದುರಾಗಿದೆ. ಅಡಕೆಯನ್ನು ಇರಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಬೆಳೆಗಾರರು ಅಡಕೆಯನ್ನು ಸಹಕಾರಿ ವಲಯದ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಜಿಲ್ಲಾ ಕೇಂದ್ರಗಳಲ್ಲಿ ಗೋದಾಮುಗಳ ಕೊರತೆಯಿದೆ. ಹೀಗಾಗಿ ಗೋದಾಮು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಹಾಯಧನ ನೀಡಬೇಕೆಂದು ಮನವಿ ಮಾಡಲಾಯಿತು.

ಅಡಕೆ ಹಾಗೂ ಕಾಳುಮೆಣಸು ಅಕ್ರಮ ಆಮದು ತಡೆಯಬೇಕು. ಅಡಕೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ಜತೆಗೆ ಅಡಕೆಯ ಗಾತ್ರದ ಆಧಾರದಲ್ಲಿ ಗುಣಮಟ್ಟದ ನಿಗದಿ ಮಾಡುವ ಬಿಐಎಸ್ ಪ್ರಮಾಣ ಪತ್ರಕ್ಕೆ ಸೂಕ್ತ ಮಾರ್ಗಸೂಚಿ ನಿರ್ಧರಿಸಬೇಕೆಂದು ಕೋರಲಾಯಿತು.

ಅಡಕೆ ಕ್ಯಾನ್ಸರ್‌ಕಾರಕ ಎಂಬ ಆರೋಪದಿಂದ ಹೊರಬರಬೇಕಾದರೆ ಅದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕು. ಅಡಕೆಯಲ್ಲಿನ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಿ ವರದಿ ಸಿದ್ದಪಡಿಸಬೇಕು. ಎಲೆಚುಕ್ಕಿ, ಹಳದಿ ಎಲೆ, ಕೊಳೆ ರೋಗಕ್ಕೆ ಸಮರ್ಪಕವಾದ ಔಷಧದ ಆವಿಷ್ಕಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net