ನೂತನ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾಪ: ಸಿಎಂ ಸಭೆಯಲ್ಲಿ ಮಹತ್ವದ ವಿಚಾರದ ಚರ್ಚೆ

Important issue discussed at CM meeting Mandya
Published on

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಬೇಕಾದ ಯೋಜನೆ ಹಾಗೂ ವಿಶೇಷ ಅನುದಾನ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಮಹತ್ವದ ವಿಷಯದ ಚರ್ಚೆ ನಡೆದಿದೆ.

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತ ಪಕ್ಷದ ಜಿಲ್ಲೆಯ ಶಾಸಕರು, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಪ್ರಸ್ತಾಪಿಸಿದ್ದಾರೆ.

ಮುಖ್ಯವಾಗಿ ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಹಾಗೂ ಮೈಶುಗರ್ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆದಿದೆ. ಈ ವಿಷಯ ಪ್ರಸ್ತಾಪಿಸಿರುವ ಶಾಸಕ ರವಿಕುಮಾರ್ ಗಣಿಗ, ಪ್ರಸ್ತುತ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿಯೇ ಜಿಲ್ಲಾಸ್ಪತ್ರೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಸೌಲಭ್ಯ ಕೊಡಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಅನುದಾನ ಕೊಡಬೇಕೆಂದು ಮನವಿ ಮಾಡಿದ್ದಾರೆ. ಇದಲ್ಲದೆ ಮೈಶುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಎಥೆನಾಲ್ ಘಟಕ ಪ್ರಾರಂಭ ಸೇರಿದಂತೆ ಅಗತ್ಯ ಕೆಲಸಕ್ಕಾಗಿ ಅನುದಾನದ ಅಗತ್ಯವಿರುವುದರಿಂದ ಬಿಡುಗಡೆಗೆ ಪ್ರಸ್ತಾಪ ಸಲ್ಲಿಸಿದ್ದಾರೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂತೆಯೇ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆಂದು ತಲಾ 50 ಕೋಟಿ ರೂ ಅನುದಾನ ಬಿಡುಗಡೆಗೆ ಸಿಎಂ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.

ಇನ್ನು ಸಭೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಬೆಂಬಲಕ್ಕೆ ಒತ್ತಾಯ ಮಾಡುವುದರ ಜತೆಗೆ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನಸೆಳೆದು ಶೀಘ್ರ ಹಾಗೂ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಬಹುಮುಖ್ಯವಾಗಿ ಆ.16ರಂದು ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವಿಗೆ ಸರ್ಕಾರ ಆದೇಶಿಸಿತ್ತು. ಅದನ್ನು ಕೂಡಲೇ ಹಿಂಪಡೆಯಬೇಕು. ಮಂಡ್ಯವನ್ನು ಕೃಷಿ ತಂತ್ರಜ್ಞಾನದ ರಾಜಧಾನಿ ಎಂದು ಘೋಷಿಸಬೇಕು. ಮಾತ್ರವಲ್ಲದೆ ಕೃಷಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ, ಮುಂತಾದ ಚಟುವಟಿಕೆಗಳಿಗೆ ಅನುದಾನ ನೀಡಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇವಲ ಸಾಲ ಮತ್ತು ಗೊಬ್ಬರ ವಿತರಣೆಗೆ ಸೀಮಿತಗೊಳಿಸದೆ, ಆಹಾರ ಪದಾರ್ಥಗಳನ್ನು ಖರೀದಿಸುವುದಕ್ಕೆ ಅವಕಾಶ ನೀಡಬೇಕು. ಇದಕ್ಕೆ ಅಗತ್ಯವಾದ ನೀತಿ ಬದಲಾವಣೆ ಮಾಡುವ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಖರೀದಿಸುವಂತೆ ಮಾಡಬೇಕು. ಇದು ರಾಜ್ಯದ ಎಲ್ಲ ಸಹಕಾರ ಸಂಘಗಳಲ್ಲೂ ಇದು ಜಾರಿಯಾಗಬೇಕು ಎಂದಿದ್ದಾರೆ.

ರಾಜ್ಯ ಸರ್ಕಾರದ ಆದೇಶದ ನಂತರವೂ ಕಿರುಸಾಲ ವಸೂಲಿಗೆ ಸಂಬಂಧಿಸಿದ ಕಿರುಕುಳ ಇನ್ನೂ ಕಡಿವಾಣ ಬಿದ್ದಿಲ್ಲ. ಸರ್ಕಾರದ ಆದೇಶದ ಬಳಿಕವೂ ಮನೆ ಜಪ್ತಿ ಮಾಡುವುದು, ಮುಂತಾದ ವಸೂಲಿ ಕಿರುಕುಳಗಳು ಮುಂದುವರೆದಿವೆ ಎನ್ನುವ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿರುವ ದರ್ಶನ್ ಪುಟ್ಟಣ್ಣಯ್ಯ, ಕಿರುಸಾಲ ನೀಡುತ್ತಿರುವ ಸಂಸ್ಥೆಗಳೊಂದಿಗೆ ಶೀಘ್ರವೇ ಮತ್ತೊಮ್ಮೆ ಸಭೆ ನಡೆಸಿ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಮಣ್ಣಿನ ಗುಣಮಟ್ಟದ ಸಮಸ್ಯೆ ತೀವ್ರವಾಗುತ್ತಿದೆ. ಎಲ್ಲೆಡೆ ಕೀಟನಾಶಕಗಳ ತೀವ್ರ ಬಳಕೆಯಿಂದ ಮಣ್ಣಿನ ಗುಣಮಟ್ಟ ಸಂಪೂರ್ಣವಾಗಿ ಹಾಳಾಗುತ್ತಿದೆ. ಇದರ ಜತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ವಹಿಸಬೇಕು. ಗ್ಲಫೋಸೈಟ್‌ನಂತಹ ಕ್ರಿಮಿನಾಶಕವನ್ನು ನಿಷೇಧಿಸಬೇಕು. ಈ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಮೈಶುಗರ್ ಕಾರ್ಖಾನೆ ಉಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಮೇಲುಕೋಟೆ ಪ್ರಾಧಿಕಾರ ಸ್ಥಾಪಿಸಿ, ಕ್ಷೇತ್ರದ ಅಭಿವೃದ್ಧಿ ಬಲ ತುಂಬಬೇಕು. ಜಿಲ್ಲೆಯ ಎಲ್ಲ ಭಾಗಗಳಿಗೆ ಸಂಪೂರ್ಣ ನೀರಿನ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ಆಧುನೀಕರಣಕ್ಕೆ ಕ್ರಮಕೈಗೊಳ್ಳುವ ನೀರಿನ ಸಮಸ್ಯೆ ಪರಿಹರಿಸಬೇಕು. ಬೆಂಗಳೂರು-ಮೈಸೂರು ಹೈವೇಯಿಂದ ಕೆಆರ್‌ಎಸ್‌ಗೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಆಗಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಇಲಾಖೆಗಳ ನಡುವಿನ ಆಂತರಿಕ ವ್ಯವಸ್ಥೆ ಸರಿಪಡಿಸಲು, ವಿವಿಧ ಇಲಾಖೆಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು, ಪ್ರತಿ ನಾಗರಿಕನಿಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ತಲುಪಿಸುವ ಹೊಸ ವ್ಯವಸ್ಥೆ ರೂಪಿಸಲು ರಾಜ್ಯಕ್ಕೆ ಒಬ್ಬ ಸಿಟಿಒ (ಮುಖ್ಯ ತಂತ್ರಜ್ಞಾನ ಅಧಿಕಾರಿ) ಮಾದರಿಯ ಹುದ್ದೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಂಡವಪುರ ಪುರಸಭೆ ಅಭಿವೃದ್ಧಿಗೆ, ಕ್ರೀಡಾಂಗಣ, ಪ್ರಜಾಸೌಧಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ನಜೀರ್ ಅಹ್ಮದ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net