ದುಡಿಯುವ ವರ್ಗಗಳ ಅಭಿವೃದ್ಧಿಗೆ ಪ್ರಾಮುಖ್ಯತೆ

09 BIRUR 02 (1)
Published on

ಬೀರೂರು: ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುವ ಜತೆಗೆ ದುಡಿಯುವ ವರ್ಗಗಳ ಏಳಿಗೆಗೂ ಪ್ರಾಮುಖ್ಯತೆ ನೀಡಲಾಗುತ್ತಿದೆ. ಶ್ರಮಿಕರ ನೋವುಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಚಾಲಕರ ನಿಲ್ದಾಣ ಮತ್ತು ಕಿತ್ತೂರು ರಾಣಿ ಚನ್ನಮ್ಮ ಆಟೋ ಚಾಲಕರ ನಿಲ್ದಾಣದ ಮೇಲ್ಚಾವಣಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಬೀರೂರು ಉತ್ತಮ ರೈಲ್ವೆ ನಿಲ್ದಾಣ ಸೇರಿದಂತೆ ರೈಲ್ವೆ ಹಾಗೂ ರಸ್ತೆ ಸಂಪರ್ಕ ಕೇಂದ್ರವಾಗಿದೆ ಆದರೆ ಕಾರಣಾಂತರಗಳಿಂದ ಪಟ್ಟಣದ ಬೆಳವಣಿಗೆ ಕುಂಠಿತಗೊಂಡಿದ್ದು ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಲ್ಲಿ ಹೆಚ್ಚಿನ ಗಮನಹರಿಸುವುದಾಗಿ ತಿಳಿಸಿದರು.
ಈಗಾಗಲೇ 30ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ ಮುಖ್ಯರಸ್ತೆಯನ್ನು ದ್ವಿಪಥ ರಸ್ತೆ ಹಾಗೂ ವಿದ್ಯುತ್‌ದೀಪಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂದಿರಾ ಕ್ಯಾಂಟೀನ್ ಆರಂಭ, ಕೆಪಿಎಸ್‌ಶಾಲೆ, ಸಮುದಾಯ ಭವನಗಳ ನಿರ್ಮಾಣ, ಸಾರ್ವಜನಿಕ ಆಸ್ಪತ್ರೆ ಸೌಲಭ್ಯ ಹೆಚ್ಚಳಕ್ಕೆ ಕ್ರಮ, ಪಟ್ಟಣ ಹೊರವಲಯದ ನಾಗರಿಕರಿಗೆ ಅನುಕೂಲವಾಗುವಂತೆ ನಮ್ಮ ಕ್ಲಿನಿಕ್ ಆರಂಭ, ಅಮೃತ್‌ಲೈನ್ ಕುಡಿಯವ ನೀರಿನ ಸೌಲಭ್ಯ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಕ್ರಮವಹಿಸುವ ಭರವಸೆ ವ್ಯಕ್ತಪಡಿಸಿದರು.
ಆಟೋ ಟ್ಯಾಕ್ಸಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್ ಮಾತನಾಡಿ, ದುಡಿಯುವ ವರ್ಗದ ಏಳಿಗೆಗೆ ಶ್ರಮಜೀವಿಗಳ ಸೌಲಭ್ಯ ಸುಧಾರಣೆಗೆ ಶಾಸಕರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪಟ್ಟಣದ ಆಟೋ ಟ್ಯಾಕ್ಸಿ ಚಾಲಕರು ಹಾಗೂ ಖಾಸಗಿ ಬಸ್‌ನಿಲ್ದಾಣದ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಿಕೊಡುವಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮವಹಿಸಿ ಬಡವರಪರ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ, ಆಟೋ ಸಂಘದ ಬೇಡಿಕೆಗಳಿಗೆ ಪೂರಕ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net