ವಾರ್ಡ್‌ವಾರು ಹವಾಮಾನ ಕ್ರಿಯಾಯೋಜನೆ ಜಾರಿ ಅಗತ್ಯ: ಪ್ರೀತಿ ಗೆಹ್ಲೋಟ್

green meeting
Published on

ಬೆಂಗಳೂರು: ನಗರದಲ್ಲಿ ಹವಾಮಾನ ಕ್ರಿಯಾಯೋಜನೆ ಅನುಷ್ಠಾನಕ್ಕಾಗಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಪರಿಹಾರಗಳನ್ನು ರೂಪಿಸಿಕೊಂಡು ಅದನ್ನು ವಾರ್ಡ್‌ವಾರು ಜಾರಿಗೊಳಿಸಬೇಕಿದೆ ಎಂದು ಬಿಬಿಎಂಪಿಯ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಹಾಗೂ ಹವಾಮಾನ ಕ್ರಿಯಾ ಕೋಶದ ಮುಖ್ಯಸ್ಥೆ ಪ್ರೀತಿ ಗೆಹ್ಲೋಟ್ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಿಬಿಎಂಪಿಯ ಹವಾಮಾನ ಕ್ರಿಯಾ ಕೋಶದ ವತಿಯಿಂದ ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ಬುಧವಾರ ಸಂವಾದಾತ್ಮಕ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಾನಗರದಲ್ಲಿ ಹವಾಮಾನವನ್ನು ಸರಿಯಾದ ಕ್ರಮದಲ್ಲಿ ಜಾರಿಗೊಳಿಸಬೇಕಾದರೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಎಲ್ಲೆಡೆ ಮಳೆನೀರು ಕೊಯ್ಲು ಪದ್ಧತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ಸರ್ಕಾರದ ಈ ಉದ್ದೇಶಗಳಿಗೆ ನಾಗರಿಕರ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದರು.

ಹಸಿರೀಕರಣ ಹೆಚ್ಚಳ ಅಗತ್ಯ:

ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾವನಗಳು ಹಾಗೂ ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಎಲ್ಲ ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಬೇಕು. ನಗರದಲ್ಲಿ ಹಸಿರೀಕರಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಪಾಲಿಕೆಯ ಅರಣ್ಯ ವಿಭಾಗದಿಂದ ಈ ಬಾರಿ 2 ಲಕ್ಷ ಸಸಿ ನೆಡುವ ಯೋಜನೆ ಇದೆ ಎಂದು ಪ್ರೀತಿ ಗೆಹ್ಲೋಟ್ ವಿವರಿಸಿದರು.

ಪರಿಸರಸ್ನೇಹಿ ಕಟ್ಟಡಗಳನ್ನು ಹೆಚ್ಚಾಗಿ ನಿರ್ಮಿಸಿ:

ಬನ್ನೇರಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾತನಾಡಿ, ಬೆಂಗಳೂರಿನಲ್ಲಿ ಹೆಚ್ಚು-ಹೆಚ್ಚು ಸಸಿಗಳನ್ನು ನೆಡುವ ಮೂಲಕ ಹಸಿರೀಕರಣವನ್ನು ಉಳಿಸಬೇಕು. ಪರಿಸರಸ್ನೇಹಿ ಕಟ್ಟಡಗಳನ್ನು ಹೆಚ್ಚಾಗಿ ನಿರ್ಮಿಸಬೇಕು. ಹವಾಮಾನದ ಕ್ರಿಯಾಯೋಜನೆ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಇದೇ ವೇಳೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದ್ದ ಬೆಂಗಳೂರು ನಗರ ಹವಾಮಾನ ಕ್ರಿಯಾ ಯೋಜನೆ ಹಾಗೂ ಪಾಲಿಕೆ ಹವಾಮಾನ ಕ್ರಿಯಾ ಕೋಶದ ಕಾರ್ಯನಿರ್ವಹಣೆಯ ಕುರಿತು ಪ್ರಾತ್ಯಕ್ಷತೆ ನೀಡಲಾಯಿತು.

ಸಭೆಯಲ್ಲಿ ಪಾಲಿಕೆ ಕೆರೆಗಳ ವಿಭಾಗದ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ತೋಟಗಾರಿಕಾ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್, ಬಿಬಿಎಂಪಿ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು, ಸಂಶೋಧನಾ ಸಂಸ್ಥೆಗಳು ಸೇರಿ ಇನ್ನಿತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net