'ಬಳಕೆಯಾಗದ ಭೂಮಿ ಸದ್ಬಳಕೆ ಯೋಜನೆ ಅನುಷ್ಠಾನ'

20
Published on

ಮೈಸೂರು: ಬಳಕೆಯಾಗದೆ ಇರುವ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಲು ಅಮೃತ್ ಯೋಜನೆಯಡಿ ಲ್ಯಾಂಡ್ ಮಾನಿಟೈಜೇಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಟೌನ್ ಆ್ಯಂಡ್ ಕಂಟ್ರಿ ಪ್ಲಾೃನಿಂಗ್ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಡಾ.ಎಂ.ಎಸ್. ಪಂಕಜಾ ತಿಳಿಸಿದರು.

ನರೆಡ್ಕೊ ಮೈಸೂರು ಶಾಖೆಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಲ್ಯಾಂಡ್ ಮಾನಿಟೈಸೇಶನ್ ಮತ್ತು ಫ್ಯೂಚರಿಸ್ಟಿಕ್ ಸಸ್ಟೈನಬಲ್ ಲಿವಿಂಗ್ ಲೇಔಟ್ ವಿನ್ಯಾಸ ಕುರಿತು ಅವರು ಉಪನ್ಯಾಸ ನೀಡಿದರು.

ಈಗಾಗಲೇ ಸಾಕಷ್ಟು ಭೂಮಿ ಬಳಕೆ ಮಾಡಿಕೊಂಡಿದ್ದರೂ, ಬಳಕೆ ಮಾಡಿಕೊಳ್ಳದೆ ಉಳಿದಿರುವ ಭೂಮಿ ಸಾಕಷ್ಟು ಇದೆ. ಅಂತಹ ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಲಾಭದಾಯಕವನ್ನಾಗಿಸಲು ಅಮೃತ್ ಯೋಜನೆಯಡಿ ಲ್ಯಾಂಡ್ ಮಾನಿಟೈಜೇಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಈ ಮೂಲಕ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿರುವ ಭೂಮಿಯನ್ನು ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಲ್ಯಾಂಡ್ ಡೆವಲಪ್‌ಮೆಂಟ್, ಬಡಾವಣೆ ಅಭಿವೃದ್ಧಿ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರ ಸಹಕಾರ ಅಗತ್ಯ ಎಂದು ಕೋರಿದರು.

ಬಳಕೆಯಾಗದ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡಬಹುದು, ಇಲ್ಲವೇ ಕಾನೂನು ತೊಡಕು ಸೇರಿದಂತೆ ನಾನಾ ಕಾರಣಕ್ಕೆ ಪರಭಾರೆ ಮಾಡಲು ಸಾಧ್ಯವಾಗದಿದ್ದರೆ ಭೋಗ್ಯಕ್ಕೆ ನೀಡಬಹುದು. ನಂತರ ಅದನ್ನು ವಾಣಿಜ್ಯ ಚಟುವಟಿಕೆ ಬಳಕೆ ಮಾಡಲು ಉತ್ತೇಜನ ನೀಡಲಾಗುವುದು. ಇದರಿಂದ ಯೋಜನೆ ಕೈಗೆತ್ತುಕೊಳ್ಳುವ ವ್ಯಕ್ತಿಗೆ ಆರ್ಥಿಕ ಲಾಭವಾಗುತ್ತದೆ. ಮಾತ್ರವಲ್ಲದೇ ದೇಶದ ಆರ್ಥಿಕತೆಯೂ ವೃದ್ಧಿಸುತ್ತದೆ ಎಂದು ಹೇಳಿದರು.

ನರೆಡ್ಕೊ ಕಾರ್ಯಾಧ್ಯಕ್ಷ ಆದಿಶೇಷಗೌಡ ಮಾತನಾಡಿ, ನಿರ್ಮಾಣ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ಆಗ ಸರಳ, ವೈಜ್ಞಾನಿಕ, ಗುಣಾತ್ಮಕವಾಗಿ ನಿರ್ಮಾಣ ಕಾರ್ಯ ಮಾಡಲು ಸಾಧ್ಯವಾಗುತ್ತದೆ ಎಂದರು.

ನರೆಡ್ಕೊ ಮೈಸೂರು ಶಾಖೆಯ ಅಧ್ಯಕ್ಷ ವಿ.ಸಿ.ರವಿಕುಮಾರ್, ಕಾರ್ಯದರ್ಶಿ ಜಿ.ಕೆ.ಸುಧೀಂದ್ರ, ಉಪಾಧ್ಯಕ್ಷ ಡಾ.ಎಂ.ಡಿ.ರಾಘವೇಂದ್ರ, ಖಜಾಂಚಿ ಎ.ಪಿ.ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net