ವಕೀಲರ ಹಿತರಕ್ಷಣಾ ಕಾಯ್ದೆ ಜಾರಿ ನಿಶ್ಚಿತ : ಸಿಎಂ ಸಿದ್ದರಾಮಯ್ಯ

CM Siddaramayya
Published on

ಮೈಸೂರು: ಮುಂದಿನ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಮಸೂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯ ವಕೀಲರ ಪರಿಷತ್, ಮೈಸೂರು ವಕೀಲರ ಸಂಘದ ವತಿಯಿಂದ ನಗರದ ದೊಡ್ಡಕೆರೆ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ 10ನೇ ವಕೀಲರ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ವೃತ್ತಿ ಸಂದರ್ಭದಲ್ಲಿ ವಕೀಲರುಗಳಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರಿಗೆ ಕಾನೂನಿನ ರಕ್ಷಣೆ ನೀಡಲು ಕಾಯ್ದೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಸರ್ಕಾರ ವಕೀಲರ ಹಿತರಕ್ಷಣಾ ಕರಡು ಮಸೂದೆ ಸಿದ್ಧಪಡಿಸಿದೆ. ಬೆಳಗಾವಿನ ಅಧಿವೇಶನದಲ್ಲಿ ನಾನು ಪ್ರತಿಪಕ್ಷ ನಾಯಕನಾಗಿ ಈ ಮಸೂದೆ ಹಾಗೂ ವಕೀಲರ ಪರವಾಗಿ ಮಾತನಾಡಿದ್ದೆ. ಅಂದು ಆಡಿದ ಮಾತಿಗೆ ನಾನು ಇಂದಿಗೂ ಬದ್ಧನಾಗಿದ್ದೇನೆ. ಈ ಮಸೂದೆಯನ್ನು ಮೊದಲ ಅಧಿವೇಶನದಲ್ಲಿಯೇ ಮಂಡಿಸಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದು ಕಾಯ್ದೆಯಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.

ರಾಜ್ಯ ವಕೀಲರ ಪರಿಷತ್‌ಗೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಬೆಂಗಳೂರಿಗೆ ಪರಿಷತ್‌ಗೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಲಾ ಗುವುದು. ಪರಿಷತ್ ಪದಾಧಿಕಾರಿಗಳು ಖಾಲಿ ಇರುವ ಜಾಗವನ್ನು ಪರಿಶೀಲಿಸಿ ನನ್ನ ಗಮನಕ್ಕೆ ತಂದರೆ ತಕ್ಷಣ ಮಂಜೂರು ಮಾಡಲು ಕ್ರಮ ವಹಿಸಲಾಗುವುದು. ವಕೀಲರ ಎಲ್ಲ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸುತ್ತೇನೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಒಂದೇ ಬಾರಿಗೆ ಈಡೇರಿಸಲು ಸಾಧ್ಯವಿಲ್ಲ. ಆದರೆ, ಬೇಡಿಕೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.

ವೇದಿಕೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅಡ್ವೋಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ, ರಾಷ್ಟ್ರೀಯ ವಕೀಲರ ಪರಿಷತ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಾಜ್ಯಾಧ್ಯಕ್ಷ ಎಚ್.ಎಲ್. ವಿಶಾಲ್ ರಘು, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net