ಕುಶಲಕರ್ಮಿಗಳಿಗೆ ಪಿ.ಎಂ.ವಿಶ್ವಕರ್ಮ ಯೋಜನೆ ಜಾರಿ

20 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಹಾಗೂ ಗ್ರಾಮೀಣ ಭಾಗದ ಕುಶಲಕರ್ಮಿಗಳ ಉದ್ಯೋಗ, ಉತ್ಪನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಪಿ.ಎಂ. ವಿಶ್ವಕರ್ಮ ಹೊಸ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯ ವಿವಿಧ ಗುಡಿ ಕೈಗಾರಿಕೆಗಳಲ್ಲಿ ತೊಡಗಿದ ಕುಶಲಕರ್ಮಿಗಳು ಯೋಜನೆಗೆ ಆನ್‌ಲೈನ್ ಮೂಲಕ ನೋಂದಾಯಿಸಬೇಕು ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ಪಿ.ಎಂ. ವಿಶ್ವಕರ್ಮ ನೂತನ ಯೋಜನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಿ.ಎಂ. ವಿಶ್ವಕರ್ಮ ಯೋಜನೆಯಡಿ 1 ಲಕ್ಷ ರೂ.ವರೆಗೆ ಶೇ. 5ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಜತೆಗೆ 15 ಸಾವಿರ ರೂ. ಉಚಿತ ಟೂಲ್ ಕಿಟ್ ನೀಡಲಾಗುತ್ತದೆ. ಭಾರತೀಯ ಆರ್ಥಿಕತೆಯು ಹಲವು ಕುಶಲಕರ್ಮಿಗಳನ್ನು ಒಳಗೊಂಡಿದೆ. ಕಮ್ಮಾರ, ಅಕ್ಕಸಾಲಿಗ, ಕುಂಬಾರ, ಬಡಗಿ, ಶಿಲ್ಪಿಗಳು, ಇತರ ಉದ್ಯೋಗದಲ್ಲಿ ತೊಡಗಿದ್ದಾರೆ. ಅಂತಹ ಅರ್ಹ ಕುಶಲಕರ್ಮಿಗಳನ್ನು ಗುರುತಿಸಿ ಆಯ್ಕೆ ಮಾಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹೇಳಿದರು.
ಯೋಜನೆಯಲ್ಲಿ 18 ಚಟುವಟಿಕೆಳನ್ನು ಗುರುತಿಸಲಾಗಿದೆ. ಒಂದು ವೇಳೆ ಇದರಲ್ಲಿ ಇಲ್ಲದ ಚಟುವಟಿಕೆಗಳು ಇದ್ದರೆ, ರಾಜ್ಯ ಮಟ್ಟದ ಆಯ್ಕೆ ಸಮಿತಿ ಗಮನಕ್ಕೆ ತರಲಾಗುವುದು. 18 ವರ್ಷ ಮೇಲ್ಪಟ್ಟವರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಒಂದು ಕುಟುಂಬಕ್ಕೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ನೌಕರರ ಕುಟುಂಬಗಳು ಈ ಯೋಜನೆಗೆ ಅನರ್ಹರು. ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಜಿಲ್ಲೆಯ ವಿವಿಧ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಇತರರು ಇದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಡಾ. ಭೀಮಪ್ಪ ಎಂ.ಎನ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net