ತಜ್ಞರ ವರದಿ ಆಧರಿಸಿಯೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ: ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟನೆ

Araga Gnandra (2)
(ಆರಗ ಜ್ಞಾನೇಂದ್ರ)
Published on

ತೀರ್ಥಹಳ್ಳಿ: ತಾಲೂಕಿನ ಭೀಮನಕಟ್ಟೆ ಬಳಿ 340 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಳ್ಳಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಲೂಕಿನ 36 ಗ್ರಾಪಂ ವ್ಯಾಪ್ತಿಯ 1,617 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ತಾಲೂಕಿನ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ನೀರಿನ ಮೂಲ ಸೇರಿದಂತೆ ತಜ್ಞರ ತಂಡದ ವೈಜ್ಞಾನಿಕ ವರದಿ ನಂತರವೇ ಸಿದ್ಧಪಡಿಸಲಾಗಿರುವ ಈ ಯೋಜನೆಯ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಜನರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಈ ಯೋಜನೆಯಲ್ಲಿ ಜನರನ್ನು ಕತ್ತಲೆಯಲ್ಲಿಟ್ಟು ಅಣೆಕಟ್ಟು ಅಥವಾ ಪಿಕ್‌ಅಪ್ ಡ್ಯಾಂ ನಿರ್ಮಿಸಿ ನೀರನ್ನು ತಡೆಯುವ ಉದ್ದೇಶವೂ ಇಲ್ಲ. ಆದರೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತ್ಯಂತ ಪಾರದರ್ಶಕವಾದ ಈ ಯೋಜನೆ ಮಂಡಗದ್ದೆ ಮತ್ತು ಸಿಂಗನಬಿದಿರೆ ಗ್ರಾಪಂಗಳನ್ನು ಹೊರತು ಪಡಿಸಿ ಉಳಿದ 36 ಗ್ರಾಪಂ ವ್ಯಾಪ್ತಿಯ 1.30 ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸುವ ಒಂದೇ ಉದ್ದೇಶವನ್ನು ಹೊಂದಲಾಗಿದೆ. ವೈಜ್ಞಾನಿಕ ವರದಿ ಆಧರಿಸಿಯೇ ಭೀಮನಕಟ್ಟೆಯಲ್ಲಿ ನೀರು ಸಂಗ್ರಹ ಘಟಕ ಸ್ಥಾಪಿಸಲು ಮುಂದಾಗಿರುವುದು. ಏಕೆಂದರೆ ಮೇ ತಿಂಗಳ ಅಂತ್ಯದ ವೇಳೆಗೆ ಅಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣ 0.0634 ಟಿಎಂಸಿ. ಇಷ್ಟು ದೊಡ್ಡ ಮೊತ್ತದ ನೀರು ಸಂಗ್ರಹವಾಗುವ ಸ್ಥಳವೂ ಬೇರೆ ಇಲ್ಲ ಎಂದು ವಿವರಿಸಿದರು.
ದಿನದ 24 ತಾಸು ನೀರು ಒದಗಿಸುವ ಈ ಯೋಜನೆಗೆ ಅಗತ್ಯ ಇರುವ ನೀರಿನ ಪ್ರಮಾಣ ಕೇವಲ 0.0107 ಟಿಎಂಸಿ ಮಾತ್ರ. ಇದಕ್ಕೆ 75 ಅಶ್ವಶಕ್ತಿಯ ಎರಡು ಪಂಪ್‌ಗಳನ್ನು ಬಳಸಲಾಗುವುದು. ಇದರಿಂದ ಕೃಷಿ ಪಂಪ್‌ಸೆಟ್ ಅಥವಾ ಕೃಷಿಕರ ಯಾವುದೇ ಚಟುವಟಿಕೆಗಳಿಗೆ ನೀರಿನ ಕೊರತೆಯಾಗುವ ಸಾಧ್ಯತೆಯೇ ಇಲ್ಲ ಸ್ಪಷ್ಟನೆ ನೀಡಿದರು.
ತಾಲೂಕಿನ ಹಲವೆಡೆ ಕುಡಿಯುವ ನೀರಿನಲ್ಲಿ ಫ್ಲ್ರೋರೈಡ್ ಅಂಶ ಇದೆ. ಈ ನೀರನ್ನು ಬಳಸುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಾಲೂಕಿನಲ್ಲಿ ಹಲವಾರು ಯೋಜನೆಗಳು ಅನುಷ್ಠಾನಗೊಳಿಸಿದ್ದರೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗಿಲ್ಲ. ಈ ಯೋಜನೆಯಿಂದ ಈ ಸಮಸ್ಯೆ ಮುಂದಿನ 30 ವರ್ಷಗಳವರೆಗೆ ಶಾಶ್ವತವಾಗಿ ಬಗೆಹರಿಯಲಿದೆ. ಜೆಜೆಎಂ ಯೋಜನೆಯಲ್ಲಿ ತಾಲೂಕಿಗೆ 150 ಕೋಟಿ ರೂ. ಅನುದಾನ ಬಂದಿದ್ದು ಮನೆಗಳಿಗೆ ನಲ್ಲಿ ಅಳವಡಿಸುವ ಕಾರ್ಯ ನಡೆದಿದೆ ಎಂದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ರಾಜೇಂದ್ರಪ್ರಸಾದ್, ಎಇಇ ಚಂದ್ರಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಮುಖಂಡರಾದ ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಸತೀಶ್, ನಂಬಳ ಮುರಳಿ, ಮಂಜುನಾಥ್ ಇದ್ದರು.

ವಿದ್ಯುತ್ ಸಹ ಉಳಿತಾಯ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಈ ಯೋಜನೆಯ ಶುದ್ಧೀಕರಣ ಘಟಕದ ಸ್ಥಾಪನೆಗೆ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಕೋಡ್ಲು ತಾಲೂಕಿನ ಸವಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಾಲ್ಕು ಎಕರೆ ಕಂದಾಯ ಭೂಮಿ ಮಂಜೂರಾಗಿದೆ. ಸಿವಿಲ್ ಕೆಲಸದ ಸಲುವಾಗಿ 267 ಕೋಟಿ ರೂ. ಅನುದಾನ ಸಹ ಬಂದಿದೆ. ಈ ಯೋಜನೆ ಪ್ರಾರಂಭವಾದ ನಂತರದಲ್ಲಿ ಗ್ರಾಪಂ ಮಟ್ಟದಲ್ಲಿ ನದಿಯ ಉದ್ದಕ್ಕೂ ಕುಡಿಯುವ ನೀರಿಗೆ ಅಳವಡಿಸಿರುವ ಸುಮಾರು 800 ಅಶ್ವಶಕ್ತಿಗೂ ಅಧಿಕ ಸಾಮರ್ಥ್ಯದ ನೂರಾರು ಪಂಪ್ ಸೆಟ್‌ಗಳನ್ನು ಸ್ಥಗಿತಗೊಳಿಸಲಾಗುವುದು. ವಿದ್ಯುತ್ ಕೂಡಾ ಉಳಿತಾಯವಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿವರಣೆ ನೀಡಿದರು.

ಒಂದೊಮ್ಮೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅವೈಜ್ಞಾನಿಕವಾಗಿದೆ ಅಥವಾ ಈ ಯೋಜನೆ ಅಗತ್ಯವೇ ಇಲ್ಲ ಎಂದಾದರೆ ನನ್ನದೇನೂ ಅಭ್ಯಂತರವಿಲ್ಲ. ಈ ಬಗ್ಗೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ.ಆರಗ ಜ್ಞಾನೇಂದ್ರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net