

ವಿಜಯಪುರ: ಜಲ ಸಂಪನ್ಮೂಲ ಸಚಿವನಾಗಿದ್ದಾಗ ನಾನು ಲಿಂ. ಸಿದ್ಧೇಶ್ವರ ಶ್ರೀಗಳ ಆಶಯದಂತೆ 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜಲ ರತ್ನಾಕರ’ ಪ್ರಶಸ್ತಿ ಪ್ರದಾನ ಮತ್ತು ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರೈತರು ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಪ್ರತಿ ವರ್ಷ ಟ್ಯಾಂಕರ್ ಮೂಲಕ ನೀರು ಖರೀದಿಸುವ ಅನಿವಾರ್ಯತೆಯನ್ನು ತಪ್ಪಿಸಿದ್ದೇನೆ. ಶ್ರೀಗಳು ನನಗೆ ‘ಜಲನಾಯಕ’ ಬಿರುದು ನೀಡಿರುವುದು ವಿಶ್ವಶ್ರೇಷ್ಠ ಪ್ರಶಸ್ತಿ ಎಂದು ಹೇಳಿದರು.
ಜಿಲ್ಲೆಯ ಜನ ನೆಮ್ಮದಿಯ ಬದುಕು ಸಾಗಿಸುವ ಕೆಲಸವನ್ನು ಮಾಡಿದ್ದೇನೆ. ಜಲ, ವೃಕ್ಷ, ಶಿಕ್ಷಣಕ್ಕೆ ಅಧಿಕ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.
ಮಮದಾಪುರದ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಎಂ.ಬಿ. ಪಾಟೀಲರ ಶ್ರಮದಿಂದ ಮತಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಬರದ ನಾಡಾಗಿದ್ದ ವಿಜಯಪುರ ಜಿಲ್ಲೆಯನ್ನು ಮಲೆನಾಡನ್ನಾಗಿ ಮಾಡಿದ್ದಾರೆ ಎಂದರು.
ಮುಖಂಡರಾದ ಕಂಠೀರವ ಕುಲ್ಲೊಳ್ಳಿ ಮಾತನಾಡಿದರು. ಎಂ.ಬಿ. ಪಾಟೀಲ ಅವರಿಗೆ ಗ್ರಾಮಸ್ಥರು ಜಲ ರತ್ನಾಕರ ಬಿರುದು ನೀಡಿ ಗೌರವಿಸಿದರು.
ಕುಬೇರ ಗುರುರಾಜ ಗೋಡೆಕರ ರಚಿಸಿರುವ ಎಂ.ಬಿ. ಪಾಟೀಲ ಸಾಧನೆಯ ಹೆಜ್ಜೆಗಳು ಪುಸ್ತಕ, ಶಿವರಾಜ ಬಡಿಗೇರ ರಚಿಸಿರುವ ಮನದಂಗಳದ ಹೂ ಕವನ ಸಂಕಲನ ಮತ್ತು ಭಾಗ್ಯಶ್ರೀ ಪಾಟೀಲ ರಚಿಸಿರುವ ಜಲೋಪಕಾರಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಮುಖಂಡರಾದ ಈರನಗೌಡ ಬಿರಾದಾರ, ಟಿ.ಎಸ್. ಕುಲಕರ್ಣಿ, ಪ್ರಕಾಶ ಸೊನ್ನದ, ಶೇಕಪ್ಪ ಕೊಪ್ಪದ, ವಿ.ಎಸ್. ಪಾಟೀಲ, ಚನ್ನಪ್ಪ ಕೊಪ್ಪದ, ಪ್ರಕಾಶ ಸೊನ್ನದ, ಡಾ. ಮಹಾಂತೇಶ ಬಿರಾದಾರ ಇತರರು ಉಪಸ್ಥಿತರಿದ್ದರು.