

ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸರ್ಕಾರ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ನಡೆಯನ್ನು ಸ್ವಾಗತಿಸಿದ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿ ವಿಜಯೋತ್ಸವ ಆಚರಿಸಿದರು.
ನಗರದ ಹರಿಜನವಾಡ ಬಡಾವಣೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಿಸಿ ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ಪರ ಘೋಷಣೆ ಹಾಕಿ ಕ್ಷೀರಾಭಿಷೇಕ ಮಾಡಿದರು, ದಲಿತಪರ ಸಂಘಟನೆ ಸಂಚಾಲಕ ಎಂ.ವಿರೂಪಾಕ್ಷಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಸುಧೀರ್ಘ ಹೋರಾಟ ನಡೆಸಿದ್ದು, ನಿರೀಕ್ಷೆಗೆ ತಕ್ಕಂತೆ ಸರ್ಕಾರದ ಸ್ಪಂದಿಸಿಲ್ಲ, ಮಾದಿಗರಿಗೆ ಶೇ.7 ರಷ್ಟು ಮೀಸಲಾತಿ ಸಿಗುತ್ತದೆ ಎಂಬುದಾಗಿತ್ತು, ಆದರೆ ನಾಗಮೋಹನ ದಾಸ್ ವರದಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿ, ಮೂರು ಭಾಗಗಳು ಮಾಡಿ ದ್ರೋಹ ಮಾಡಿದ್ದಾರೆ. ಇದೀಗ ಸಮಾದಾನಕರವಾಗಿ ಶೇ.6 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿದೆ, ಮುಂದಿನ ದಿನಗಳಲ್ಲಿ ಮತ್ತೆ ನಮಗೆ ಶೇ.7 ರಷ್ಟು ಮೀಸಲಾತಿ ಸಿಗುವವರೆಗೆ ಹೋರಾಟ ನಿರಂತರವಾಗಿ ನಡೆಸುತ್ತೇವೆ ಎಂದರು.
ಒಳ ಮೀಸಲಾತಿ ಹೋರಟ ಸಮಿತಿ ರಾಜ್ಯ ಸಂಚಾಲಕ ಎಸ್.ಮಾರೆಪ್ಪ ವಕೀಲ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಹೋರಾಟ ಜಗತ್ತಿನಲ್ಲಿ ಒಂದು ಇತಿಹಾಸ ದಾಖಲಾಗಿದೆ, ಚಳವಳಿ ಸುದೀರ್ಘವಾಗಿ ಮಾಡಲಾಗಿದೆ, ಅಲೆಮಾರಿಗಳು ಮುಂದೆಯೂ ಜೊತೆಗೆ ಇರುತ್ತಾರೆ. ಬೆಂಗಳೂರಿನಲ್ಲಿ ಆಹೋರಾತ್ರಿ ಧರಣಿ ಮಾಡಲಾಗಿತ್ತು, ಸಿಎಂ ಸಿದ್ದರಾಮಯ್ಯ ನಿರ್ಣಯ ತೆಗೆದುಕೊಂಡಿದ್ದಾರೆ, ಜನಸಂಖ್ಯೆವಾರು ಮಾದಿಗ ಸಮಾಜಕ್ಕೆ ಶೇ.7 ರಷ್ಟು ನೀಡಬೇಕು ಎಂದು ಒತ್ತಾಯಿಸಲಾಗಿತ್ತು, ಇದೀಗ ಸಮುದಾಯಕ್ಕೆ ಶೇ.6 ರಷ್ಟು ನೀಡಿದ್ದು ಮುಂದಿನ ದಿನಗಳಲ್ಲಿ ಶೇ.7 ರಷ್ಟು ಮೀಸಲಾತಿ ಪಡೆಯಲು ಹೋರಾಟ ನಿರಂತರವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ, ಪಾಲಿಕ ಸದಸ್ಯರುಗಳಾದ ಎಂ.ಪವನಕುಮಾರ, ನರಸರೆಡ್ಡಿ, ಹೇಮರಾಜ ಅಸ್ಕಿಹಾಳ, ಆಂಜನೇಯ ಕುರುಬದೊಡ್ಡಿ, ರೆಡ್ಡಿ ತಿಮ್ಮಪ್ಪ, ಎಂ.ಆರ್ ಬೇರಿ, ಬೂದೆಪ್ಪ, ಪಿ.ಅಮರೇಶ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.