

ಮುಳಬಾಗಿಲು: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 2025ರ ಜ.1ರಿಂದ ರಾಜ್ಯ ಸರ್ಕಾರ "ಗೃಹ ಆರೋಗ್ಯ' ಎಂಬ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ತಾಲೂಕಿನ ನಂಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮುಳಬಾಗಿಲು ನಗರದ ಹೊರವಲಯದ ನರಸಿಂಹತೀರ್ಥದ ಬಳಿ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ಮನೆ ಸಮೀಕ್ಷೆ ನಡೆಸಿ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ. ಸಮಸ್ಯೆ ಕಂಡು ಬಂದರೆ ತಿಂಗಳಿಗೆ ಆಗುವಷ್ಟು ಔಷಧಗಳನ್ನು ಮನೆ ಬಾಗಿಲಿಗೆ ಗೃಹ ಆರೋಗ್ಯ ಯೋಜನೆಯಡಿ ತಲುಪಿಸಲಾಗುವುದು. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಜಾರಿಗೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ನಂಗಲಿಯಲ್ಲಿ 12.50 ಕೋಟಿ ರೂ.ವೆಚ್ಚದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ, ಮುಳಬಾಗಿಲಿನಲ್ಲಿ 20 ಕೋಟಿ ರೂ. ಅನುದಾನದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಸ್ಥಳ ಸಮತಟ್ಟು ಮಾಡಲು ಖರ್ಚು ಹೆಚ್ಚಾಗಿದ್ದರಿಂದ ವಸತಿ ಗೃಹ ನಿಮಾರ್ಣಕ್ಕೆ ಅನುದಾನ ಕೊರತೆ ಉಂಟಾಗಿದೆ. ಮುಂದಿನ ಹಂತದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹ ನಿಮಾರ್ಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಲೂರು ಮತ್ತು ಮುಳಬಾಗಿಲು ಆಸ್ಪತ್ರೆಗಳ ಹಳೇ ಕಟ್ಟಡಗಳ ಮೇಲೆ ಹೊಸ ಕಟ್ಟಡ ನಿರ್ಮಿಸಿರುವುದರಿಂದ ಕಟ್ಟಡ ದುರಸ್ತಿ ಹೆಚ್ಚಾಗಿ ಬರುತ್ತದೆ. ಇದನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಶೀಘ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ವಾಪಸ್ ಪಡೆಯಲಾಯಿತು. ಆದರೆ ಸಿಎಂ ಅವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳನ್ನು ತಿಳಿಸಿದಾಗ ಅವರು ಸ್ಪಂದಿಸಿ ಎಲ್ಲ ಅನುದಾನ ವಾಪಸ್ ನೀಡುವುದರೊಂದಿಗೆ ಹೊಸ ಅನುದಾನ ಬಿಡುಗಡೆ ಮಾಡಿದ್ದಾರೆ. ಆರೋಗ್ಯ ಸಚಿವರು 3 ಹೊಸ ಆಂಬುಲೆನ್ಸ್ ನೀಡಿದ್ದಾರೆ. ತಾಲೂಕು ಆಸ್ಪತ್ರೆ ಅಧ್ವಾನವಾಗಿದ್ದು, ನೂತನ ಆಸ್ಪತ್ರೆಯ ನಿಮಾರ್ಣಕ್ಕೆ ಸಚಿವರು ಆದೇಶ ಮಾಡಬೇಕೆಂದು ಮನವಿ ಮಾಡಿದರು.
ತಾಪಂ ಇಒ ಡಾ.ಕೆ.ಸರ್ವೇಶ್, ಪೌರಾಯುಕ್ತ ವಿ.ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ವಿ.ರಘುಪತಿರೆಡ್ಡಿ, ಮುಖಂಡರಾದ ಕೋಳಿ ಕೆ.ಎಚ್.ನಾಗರಾಜ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಎನ್.ಆರ್.ಸತ್ಯಣ್ಣ, ಶಶಿಕಾಂತ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಜನರ ತೆರಿಗೆಯಿಂದ ಸರ್ಕಾರ
ಪ್ರತಿ ಪಕ್ಷಗಳ ಶಾಸಕರು ಇರುವ ಕಡೆ ಅನುದಾನ ನೀಡುವುದಿಲ್ಲ ಎಂಬ ಆರೋಪ ಸುಳ್ಳು. ನಾನು ಸಹ ಪ್ರತಿ ಪಕ್ಷದ ಶಾಸಕನಾಗಿದ್ದಾಗ ನನ್ನ ಕ್ಷೇತ್ರಕ್ಕೂ ಅನುದಾನ ಬಂದಿದೆ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಅಭಿವೃದ್ಧಿಯಲ್ಲಿ ಪಕ್ಷಪಾತ ಇರಬಾರದು. ಜನರ ತೆರಿಗೆಯಿಂದ ಸರ್ಕಾರ ನಡೆಯುತ್ತಿದೆ ವಿನಾ ನಾವು ನಮ್ಮ ಮನೆಯಿಂದ ಕೊಡುವುದಿಲ್ಲ ಎಂದರು.
ಮುಳಬಾಗಿಲಿನಲ್ಲಿ ಹೆಚ್ಚು ಹೆರಿಗೆ
ಕೋಲಾರ ಜಿಲ್ಲಾ ಕೇಂದ್ರ ಬಿಟ್ಟರೆ ಮುಳಬಾಗಿಲಿನಲ್ಲಿ ಪ್ರತಿ ತಿಂಗಳು 150 ರಿಂದ 200 ಹೆರಿಗೆ ಪ್ರಕರಣಗಳು ದಾಖಲಾಗುತ್ತಿದ್ದು, ತಾಯಿ&ಮಗು ಸುರಕ್ಷತೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸುಸಜ್ಜಿತ ಸೌಲಭ್ಯಗಳೊಂದಿಗೆ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಬಾಣಂತಿಯರ ಸಾವಿಗೆ ವ್ಯವಸ್ಥೆಯ ವೈಲ್ಯ
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ನಮ್ಮ ವ್ಯವಸ್ಥೆಯ ವೈಲ್ಯಗಳಿಂದ ಆಗಿರುವ ಘಟನೆ, ಈ ಸಂಬಂಧ ಈಗಾಗಲೇ ಶಿಸ್ತು ಕ್ರಮ ಜರುಗಿಸಿ, ನೋಟಿಸ್ ಜಾರಿ ಮಾಡಲಾಗಿದೆ. ಔಷಧ ಪೂರೈಕೆ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪಶ್ಚಿಮ ಬಂಗಾಳದ ಔಷಧ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ಥೆ ಸರಿಪಡಿಸಲು ುಡ್ ಆಂಡ್ ಡ್ರಗ್ ಕಂಟ್ರೋಲ್ಗೆ ಐಎಎಸ್ ಅಧಿಕಾರಿ ನೇಮಿಸುತ್ತೇವೆ. ಬಾಣಂತಿಯರ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಅಶೋಕ್ಗೆ ಮಾಹಿತಿ ಇಲ್ಲ
ಬ್ಯಾನ್ ಮಾಡಿರುವ ಔಷಧ ಖರೀದಿ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ -ದಿನೇಶ್ ಗುಂಡೂರಾವ್, ನಾವು ಯಾವುದೇ ಬ್ಯಾನ್ ಆಗಿರುವ ಔಷಧ ಖರೀದಿ ಮಾಡಿಲ್ಲ, ಆರ್.ಅಶೋಕ್ ಅವರಿಗೆ ಮಾಹಿತಿ ಇಲ್ಲ. ಸದರಿ ಕಂಪನಿಯ100ಕ್ಕೂ ಹೆಚ್ಚಿನ ಔಷಧಗಳಲ್ಲಿ 22 ವಿವಿಧ ಔಷಧ ತಪಾಸಣೆ ನಡೆಸಿದಾಗ ರಾಜ್ಯದಲ್ಲಿ ೇಲ್ ಆದರೂ, ಕೇಂದ್ರದ ಲ್ಯಾಬ್ನಲ್ಲಿ ಔಷಧ ಪಾಸ್ ಆಗಿದೆ ಎಂದರು.
ಏಪ್ರಿಲ್ನಿಂದ ನವೆಂಬರ್ವರೆಗೂ 2 ಸಾವಿರ ಹೆರಿಗೆ ಆಗಿದೆ. ಯಾರೂ ಸತ್ತಿಲ್ಲ. ಆದರೆ, ಇದ್ದಕ್ಕಿದ್ದಂತೆ ಸಾವು ಸಂಭವಿಸಿದ ನಂತರ ನಾವು ತನಿಖೆ ನಡೆಸಿದ್ದೇವೆ. ಮಹಿಳೆಯರ ಸಾವಿನಲ್ಲಿ ವೈದ್ಯರ ಲೋಪವಿಲ್ಲ. ಬೇರೇನೋ ಇರಬಹುದೆಂಬ ಅನುಮಾನ ಇದೆ. ತನಿಖೆ ನಂತರ ತಿಳಿಯಲಿದೆ. ಆರೋಗ್ಯ ಇಲಾಖೆಯಲ್ಲಿ ಇದೊಂದು ದೊಡ್ಡ ವೈಲ್ಯ ಆಗಿದೆ, ಬಿಜೆಪಿ ಸರ್ಕಾರ ಇದ್ದಾಗಲು ಯಾರದ್ದು ಸಾವಾಗಿಲ್ಲವೇ ಎಂದು ಪ್ರಶ್ನಿಸಿದ ಸಚಿವರು, ಕೋವಿಡ್ ಕಾಲದಲ್ಲಿ ಆಕ್ಸಿಜನ್ ದುರಂತರದಲ್ಲಿ ಎಷ್ಟು ಮಕ್ಕಳು ಸಾವನ್ನಪ್ಪಿದರು? ಇದು ಯಾರ ಲೋಪ ಎಂದು ಪ್ರಶ್ನಿಸಿದರು.