ಅರಕಲಗೂಡು: ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿ ಪ್ರಕ್ರಿಯೆ ಜಾರಿಯಾಗಿದ್ದು ರೈತರು ಇದರ ಸದುಪಯೋಗ ಪಡೆಯುವಂತೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಜಿ.ಕವಿತಾ ಮನವಿ ಮಾಡಿದ್ದಾರೆ.
2024ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒರಿಯಂಟಲ್ ಜನರಲ್ ಇನ್ಷುರೆನ್ಸ್ ಕಂಪನಿ ಸಹಯೋಗದಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅಧಿಸೂಚಿತ ಬೆಳೆಗಳಾದ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ ನೀರಾವರಿ, ಮಳೆಯಾಶ್ರಿತ ರಾಗಿ ಹಾಗೂ ಹೋಬಳಿ ಮಟ್ಟದಲ್ಲಿ ಕಸಬಾ ಮತ್ತು ಕೊಣನೂರು ಹೋಬಳಿಯಲ್ಲಿ ಮಳೆಯಾಶ್ರಿತ ಆಲಸಂದೆ, ಮುಸುಕಿನ ಜೋಳ, ಆಲೂಗಡ್ಡೆ ಮತ್ತು ನೀರಾವರಿ ಮುಸಕಿನ ಜೋಳ, ದೊಡ್ಡಮಗ್ಗೆ ಮತ್ತು ರಾಮನಾಥಪುರ ಹೋಬಳಿಗಳಲ್ಲಿ ಮಳೆಯಾಶ್ರಿತ ಆಲಸಂದೆ, ಆಲೂಗಡ್ಡೆ ಮತ್ತು ಮುಸುಕಿನ ಜೋಳ ಬೆಳೆಗಳು, ಮಲ್ಲಿಪಟ್ಟಣ ಹೋಬಳಿಯಲ್ಲಿ ಮಳೆಯಾಶ್ರಿತ ಆಲೂಗಡ್ಡೆ, ಮುಸುಕಿನ ಜೋಳ ಬೆಳೆಗಳನ್ನು ಬೆಳೆಯುವ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಬೆಳೆ ಸಾಲ ಪಡೆಯದ ಹಾಗೂ ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆಯಲ್ಲಿ ನೋಂದಾವಣೆ ಮಾಡಿಕೊಳ್ಳಲು ಆಯ್ಕೆಯ ಅವಕಾಶವಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 3,865 ರೈತರು ನೋಂದಾಯಿಸಿಕೊಂಡಿದ್ದು ಕಳೆದ ಸಾಲಿನಲ್ಲಿ 1,928 ರೈತರಿಗೆ ರೂ 1.32 ಕೋಟಿ ರೂ. ಪರಿಹಾರ ಪಾವತಿಯಾಗಿದ್ದು, ಪರಿಹಾರ ಪಾವತಿ ಕಾರ್ಯ ಪ್ರಗತಿಯಲ್ಲಿದೆ. ನಿಗದಿತ ಅವಧಿಯೊಳಗೆ ಬೆಳೆ ವಿಮೆ ನೊಂದಾಯಿಸಿಕೊಳ್ಳಲು ಅರ್ಜಿಯೊಂದಿಗೆ ಭೂಮಿ ಹೊಂದಿರುವ ಕುರಿತು ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.