

ಹುಬ್ಬಳ್ಳಿ : ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ (ಇಎಲ್ಐ) ಯೋಜನೆಯನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಹುಬ್ಬಳ್ಳಿ ವಲಯ ಕಚೇರಿಯ ಹೆಚ್ಚುವರಿ ಆಯುಕ್ತ ರಾಮಕೇಶ ಮೀನಾ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಪಾದನಾ ವಲಯ ಮತ್ತು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ಮೂಲಕ ಗಮನ ಹರಿಸಲಾಗಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಎರಡು ಕಂತುಗಳಲ್ಲಿ ಗರಿಷ್ಠ 15 ಸಾವಿರ ರೂ.ವರೆಗೆ ಪ್ರೋತ್ಸಾಹ ಧನ ಪಡೆಯಲಿದ್ದಾರೆ ಎಂದು ತಿಳಿಸಿದರು.
1 ಲಕ್ಷ ಕೋಟಿ ರೂ. ನಿಧಿ ಹೊಂದಿರುವ ಈ ಯೋಜನೆಯು ಎರಡು ವರ್ಷಗಳಲ್ಲಿ 3.5 ಕೋಟಿಗಿಂತ ಅಧಿಕ ಉದ್ಯೋಗಗಳ ಸೃಷ್ಟಿಗೆ ಬೆಂಬಲ ನೀಡಲಿದೆ. 2025ರ ಆಗಷ್ಟ್ 1 ರಿಂದ 2027ರ ಜುಲೈ 31ರ ಮಧ್ಯೆ ಸೃಷ್ಟಿಯಾದ ಉದ್ಯೋಗಗಳಿಗೆ ಈ ಯೋಜನೆಯ ಪ್ರಯೋಜನಗಳು ಅನ್ವಯಿಸಲಿವೆ ಎಂದರು.
ಮೊದಲ ಬಾರಿಗೆ ಉದೊ್ಯೕಗ ಪಡೆಯುವವರಿಗೆ ಆರು ತಿಂಗಳ ಬಳಿಕ ಎರಡು ಕಂತಿನಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಆಗಲಿದೆ. ಇನ್ನೂ ಉದೊ್ಯೕಗ ನೀಡುವ ಕಂಪನಿಯಲ್ಲಿ 50 ಜನ ಕೆಲಸಗಾರರು ಇರಬೇಕು. ಈ ಯೋಜನೆ ಸೌಲಭ್ಯ ಪಡೆಯಲು 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರರು ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು ಹಾಗೂ 50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರು ಐವರು ಹೆಚ್ಚುವರಿ ಉದ್ಯೋಗಿಗಳನ್ನು ಕನಿಷ್ಠ 6 ತಿಂಗಳವರೆಗೆ ಕಾಯಂ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದು ವಿವರಿಸಿದರು.
ಇಪಿಎಫ್ಒ ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಸೌಲಭ್ಯ ದೊರೆಯಲಿದೆ. ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.