

ಹಾನಗಲ್ಲ: ಮುಂದಿನ 30 ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಪ್ರತಿವ್ಯಕ್ತಿಗೆ ಪ್ರತಿದಿನ 135 ಲೀಟರ್ನಂತೆ ಇಡೀ ಪಟ್ಟಣಕ್ಕೆ 8.88 ದಶಲಕ್ಷ ಲೀಟರ್ ನೀರು ಪೂರೈಸುವ ಉದ್ದೇಶದೊಂದಿಗೆ ಮಹತ್ವಾಕಾಂಕ್ಷೆಯ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಶನಿವಾರ ಪಟ್ಟಣದ ಪೊಲೀಸ್ ಠಾಣೆಯ ಬಳಿ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 35 ಕೋಟಿ ರೂ. ವೆಚ್ಚದಲ್ಲಿ ಮಳಗಿಯ ಧರ್ವ ಜಲಾಶಯದಿಂದ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದುವರೆಗೆ ಧರ್ವ ಜಲಾಶಯದಿಂದ ಕಾಲುವೆ ಮೂಲಕ ಆನಿಕೆರೆಗೆ ನೀರು ಹರಿಸಲಾಗುತ್ತಿತ್ತು. ಕಾಲುವೆಯಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಹೆಚ್ಚು ನೀರು ಪೋಲಾಗಿ ಹೋಗುತ್ತಿತ್ತು. ಹೊಸ ಯೋಜನೆಯಿಂದ ನೀರು ಪೋಲಾಗದೆ ಪೈಪ್ಲೈನ್ ಮೂಲಕ ನೇರವಾಗಿ ಜಲಾಗಾರಗಳಿಗೆ ಸಂಗ್ರಹ ಮಾಡಿ ಪೂರೈಸಲಾಗುವುದು. ಈ ವ್ಯವಸ್ಥೆಯಿಂದ ಹಾನಗಲ್ಲಿಗೆ 24/7 ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ. ಹಲವು ದಶಕಗಳಿಂದ ಚರ್ಚೆಯಲ್ಲಿದ್ದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಈಗ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗದಗ ವಿಭಾಗದ ಇಂಜಿನಿಯರ್ ಜಗದೀಶ ಹೊಸಮನಿ ಮಾತನಾಡಿ, ಧರ್ವ ನದಿ ನೀರನ್ನು ಪಂಪ್ ಮಾಡುವ ಮೂಲಕ ಆನೆಕೆರೆ ತುಂಬಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಲಾರದು ಎಂದು ಭರವಸೆ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಎಸ್.ರೇಣುಕಾ, ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಸೇರಿದಂತ ಪುರಸಭೆ ಸದಸ್ಯರು ಇದ್ದರು.