ಫಸಲ್ ಬಿಮಾ ಯೋಜನೆ ಅನುಷ್ಠಾನ: ಆಸಕ್ತರು ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ

crop insurance
Published on

ಮಂಡ್ಯ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ(ನೀರಾವರಿ) ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅಧಿಸೂಚಿತ ಗ್ರಾಪಂಗಳಲ್ಲಿ, ರಾಗಿ(ಮಳೆಯಾಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಅಧಿಸೂಚಿತ ಗ್ರಾಪಂ ಹಾಗೂ ಮುಸುಕಿನಜೋಳ(ಮಳೆಯಾಶ್ರಿತ) ಬೆಳೆಗೆ ಮಳವಳ್ಳಿ ತಾಲೂಕು ಅಧಿಸೂಚಿತ ಗ್ರಾಪಂನಲ್ಲಿ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು.

ಹೋಬಳಿ ಮಟ್ಟದಲ್ಲಿ ಭತ್ತ(ನೀರಾವರಿ), ರಾಗಿ(ನೀರಾವರಿ), ರಾಗಿ(ಮಳೆಯಾಶ್ರಿತ), ಮುಸುಕಿನಜೋಳ(ನೀರಾವರಿ), ತೊಗರಿ (ಮಳೆಯಾಶ್ರಿತ), ಹುರುಳಿ(ಮಳೆಯಾಶ್ರಿತ), ನೆಲಗಡಲೆ(ಮಳೆಯಾಶ್ರಿತ), ಅಲಸಂದೆ(ಮಳೆಯಾಶ್ರಿತ), ಎಳ್ಳು(ಮಳೆಯಾಶ್ರಿತ), ಟೊಮ್ಯಾಟೋ ಮತ್ತು ಎಲೆಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಯಲ್ಲಿ ನೋಂದಾಯಿಸಿಕೊಳ್ಳಬಹುದು.

ಯೋಜನೆಯ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಒಳಪಡಿಸಲಾಗುವುದು. ಒಂದು ವೇಳೆ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬಹುದು. ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ವಿವರಗಳೊಂದಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರದಲ್ಲಿ ನೋಂದಾಯಿಸಬಹುದಾಗಿದೆ. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರವನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net