ಎಲ್ಲರಿಗೂ ಶಿಕ್ಷಣ.. ಬನ್ನಿ ಕಲಿಯೋಣ..

Education 1
Published on

ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತೆಯ ಗುರಿ

ಎಲ್ಲ ವಯಸ್ಕರಿಗಾಗಿ ಕಲಿಕಾ ಕಾರ್ಯಕ್ರಮ ಜಾರಿ

ಪ್ರಶಾಂತ ಭಾಗ್ವತ, ಉಡುಪಿ

ಮಾನವನ ವ್ಯಕ್ತಿತ್ವ ಹಾಗೂ ಜೀವನ ಕ್ರಮವು ಪಡೆದ ಶಿಕ್ಷಣವನ್ನೇ ಅವಲಂಬಿಸಿರುತ್ತದೆ. ವಿದ್ಯೆ ಇಲ್ಲದವನ ಬದುಕು ಹದ್ದಿಗಿಂತ ಕಡೆ ಎಂಬ ನಾಣ್ಣುಡಿಯಂತೆ ಅಕ್ಷರಾಭ್ಯಾಸದಿಂದ ಮಾತ್ರ ಶಿಸ್ತುಬದ್ಧ ಹಾಗೂ ಆತ್ಮವಿಶ್ವಾಸದಿಂದ ಜೀವನ ನಿರ್ವಹಿಸಲು ಸಾಧ್ಯ. ಇದೇ ಧ್ಯೇಯದೊಂದಿಗೆ ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯು ಎಲ್ಲರಿಗೂ ಶಿಕ್ಷಣ ಎಂಬ ಸಾಕ್ಷರತಾ ಕಾರ್ಯಕ್ರಮ ಜಾರಿಗೊಳಿಸಿದೆ.

ಮೂರು ವರ್ಷದಲ್ಲಿ ಮೂರು ವಿಧದ ಸಾಕ್ಷರತಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 5,130 ವಯಸ್ಕರು ಅಕ್ಷರಸ್ಥರಾಗಿದ್ದಾರೆ. ಉಡುಪಿಯು ಸಾಕ್ಷರತೆ ಸಾಧಿಸಿದ ಜಿಲ್ಲೆಯಾಗಿದ್ದರೂ ಸಹ 15 ವರ್ಷ ಮೇಲ್ಪಟ್ಟ ಅನಕ್ಷರಸ್ಥರಿಗೆ, ವಯಸ್ಕರಿಗೆ ಕಲಿಕೆ ಮುಂದುವರಿಸಲು ಪ್ರೇರಣೆ ನೀಡಲು ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.

11 ವರ್ಷ ಕಾರ್ಯಕ್ರಮ ಸ್ಥಗಿತ

ಅಖಂಡ ದಕ್ಷಿಣ ಕನ್ನಡ ಜಿಲ್ಲೆಯ ವಿಭಜನೆಯ ನಂತರದಲ್ಲಿ ಉಡುಪಿ ಜಿಲ್ಲೆಯು 2010-11ರಲ್ಲಿ ಸಾಕ್ಷರ ಜಿಲ್ಲೆ ಎಂದು ಗುರುತಿಸಿಕೊಂಡಿತ್ತು. ಜಿಲ್ಲೆಯಲ್ಲಿ ತದನಂತರ ಯಾವುದೇ ರೀತಿಯ ಸಾಕ್ಷರತಾ ಕಾರ್ಯಕ್ರಮವೇ ನಡೆದಿಲ್ಲ. 2022-23ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಘೋಷಿತ "ಸಾವಿರ ಗ್ರಾಪಂ ಸಾಕ್ಷರತಾ ಕಾರ್ಯಕ್ರಮದಿಂದಾಗಿ ಉಡುಪಿ ಜಿಲ್ಲೆಯಲ್ಲೂ ಮತ್ತೆ ಸಾಕ್ಷರತಾ ಕಾರ್ಯಕ್ರಮ ಪ್ರಾರಂಭವಾಗಿದೆ.

128 ಬೋಧಕರು, ಕಲಿಕಾ ಕೇಂದ್ರ

Education 2
ಜಿಲ್ಲೆಯಲ್ಲಿ ಅನಕ್ಷರಸ್ಥರಿಗಾಗಿ 3 ಬಗೆಯ ಸಾಕ್ಷರತಾ ಯೋಜನೆಯಡಿ 128 ಕಲಿಕಾ ಕೇಂದ್ರ ತೆರೆಯಲಾಗಿದ್ದು, 128 ಬೋಧಕರಿದ್ದಾರೆ. ಬ್ರಹ್ಮಾವರ ತಾಲೂಕಿನ ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 7 ಕಲಿಕಾ ಕೇಂದ್ರದಲ್ಲಿ ಜಿಲ್ಲಾ ಲೀಡ್​ ಡಾಕ್ಯುಮೆಂಟ್​ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, 46 ಅನಕ್ಷರಸ್ಥರು ಕಲಿಕೆಯಲ್ಲಿದ್ದಾರೆ.

ಎಲ್ಲ ತಾಲೂಕಿನಲ್ಲಿ ಕಲಿಕೆ

ಈ ಹಿಂದೆ ಕಾರ್ಯಕ್ರಮ ಅನುಷ್ಠಾನಗೊಂಡ ಗ್ರಾಪಂ ವ್ಯಾಪ್ತಿ ಹೊರತುಪಡಿಸಿ ಸಾವಿರ ಗ್ರಾಪಂ ಸಾಕ್ಷರತಾ ಕಾರ್ಯಕ್ರಮದಡಿ 102 ಕೇಂದ್ರ ತೆರೆದಿದ್ದು, 102 ಬೋಧಕರು 2,037 ಅನಕ್ಷರಸ್ಥರಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಎಲ್ಲ ಶೈಕ್ಷಣಿಕ ತಾಲೂಕುಗಳಲ್ಲಿ ನವಭಾರತ ಸಾಕ್ಷರತಾ ಕಾರ್ಯಕ್ರಮದಡಿ 19 ಕಲಿಕಾ ಕೇಂದ್ರ ತೆರೆದಿದ್ದು, 19 ಬೋಧಕರು 381 ಅನಕ್ಷರಸ್ಥರಿಗೆ ಜ್ಞಾನದಾಹ ನೀಗಿಸುತ್ತಿದ್ದಾರೆ.

ವಯಸ್ಕರ ಅಕ್ಷರತೆಗೆ 110 ವರ್ಷದ ಇತಿಹಾಸ!

Educaion 4
ಔಪಚಾರಿಕ ಶಿಕ್ಷಣವನ್ನೂ ಪಡೆಯದ ಅನಕ್ಷರಸ್ಥರಿಗೆ ಓದುಬರಹ, ಲೆಕ್ಕಾಚಾರ ಕಲಿಸುವ ವಯಸ್ಕರ ಶಿಕ್ಷಣ ಇಲಾಖೆಗೆ 110 ವರ್ಷದ ಇತಿಹಾಸವಿದೆ. ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ಸರ್​. ಎಂ.ವಿಶ್ವೇಶ್ವರಯ್ಯ ಅವರು ಬೈಸಿಕಲ್​ನಲ್ಲಿ ಹಳ್ಳಿಗಳಿಗೆ ಹೋಗಿ ಅನಕ್ಷರಸ್ಥರಿಗೆ ಅಕ್ಷರಭ್ಯಾಸ ಮಾಡಿಸುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅನಕ್ಷರಸ್ಥ ವಯಸ್ಕರಿಗೆ ಶಿಕ್ಷಣ ನೀಡಲು ಸಾಕ್ಷರತಾ ಕಾರ್ಯಕ್ರಮ ಜಾರಿಯಲ್ಲಿದೆ. 1978ರಲ್ಲಿ ರಾಜ್ಯದಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳ ಮೇಲ್ವಿಚಾರಣೆ ಹಾಗೂ ಪರಿವೀಕ್ಷಣೆಗಾಗಿ ವಯಸ್ಕರ ಶಿಕ್ಷಣ (Adult Education) ನಿರ್ದೇಶನಾಲಯ ಸ್ಥಾಪನೆಯಾಯಿತು. 1989ರಲ್ಲಿ ರಾಜ್ಯ ವಯಸ್ಕರ ಶಿಕ್ಷಣ ನಿರ್ದೇಶನಾಲಯವನ್ನು ಲೋಕ ಶಿಕ್ಷಣ ನಿರ್ದೇಶನಾಲಯ (Directorate of Mass Education) ಎಂದು ಮರು ನಾಮಕರಣ ಮಾಡಲಾಯಿತು. 1988-89ರಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ 'ರಾಜ್ಯ ಸಾಕ್ಷರತಾ ಮಿಷನ್​ ಪ್ರಾಧಿಕಾರ' ಸ್ಥಾಪನೆಯಾಗಿ, ಇದರಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಾಯೋಜಿತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲಾ, ತಾಲೂಕು, ಗ್ರಾಪಂ, ಲೋಕ ಶಿಕ್ಷಣ ಸಮಿತಿ, ಜಿಲ್ಲಾ ನಗರ ಸಾಕ್ಷರತಾ ಸಮಿತಿ ಹಾಗೂ ವಾರ್ಡ್​ ಮಟ್ಟದ ಸ್ಥಳೀಯ ಸಾಕ್ಷರತಾ ಸಮಿತಿ ಮೂಲಕ ಮುನ್ನಡೆಯುತ್ತಿದೆ. 2022ರ ಡಿ.16ರಿಂದ ಲೋಕ ಶಿಕ್ಷಣ ನಿರ್ದೇಶನಾಲಯವು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯೊಂದಿಗೆ ವಿಲೀನಗೊಂಡು ಲೋಕ ಶಿಕ್ಷಣ ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ 3 ಕಾರ್ಯಕ್ರಮ

ಕ್ರ.ಸಂ.         ಸಾಕ್ಷರತಾ ಕಾರ್ಯಕ್ರಮ             ವರ್ಷ                ಕಲಿತವರು              ಒಟ್ಟು 1)               ಜಿಪಂ ಲಿಂಕ್​ ಡಾಕ್ಯುಮೆಂಟ್​         2022-23             46                                                                 2023-24             46                                                                 2024-25             46                       138 2)             ಸಾವಿರ ಗ್ರಾಪಂ ಸಾಕ್ಷರತಾ         2022-23(ಹಂತ-1)   324                                                               2022-23(ಹಂತ-2)  1,139                                                               2022-23(ಹಂತ-3)  2,037                                                               2023-24                  437                    3,937 3)           ನವ ಭಾರತ ಸಕ್ಷರತಾ                  2022-23                   674                                                               2023-24 (ಪ್ರಸಕ್ತ)       381                  1,055 * ಮೂರು ಸಾಕ್ಷರತಾ ಕಾರ್ಯಕ್ರಮದಲ್ಲಿ ಕಲಿತ ಒಟ್ಟು ವಯಸ್ಕರು                                   5,130

ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತೆ ಗುರಿ ಸಾಧನೆಗಾಗಿ ಶಾಲಾ ಶಿಕ್ಷಣ ಇಲಾಖೆ, ಪಂಚಾಯತ್​ ಇಲಾಖೆ, ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಮತ್ತು ಸ್ವಯಂ ಸೇವಕರ ಸಹಾಯದಿಂದ ಗ್ರಾಪಂ ಮಟ್ಟದಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಬೋಧಕರಿಂದ ಅಕ್ಷರಾಭ್ಯಾಸ ಮಾಡಿಸುತ್ತೇವೆ. ಅವರಿಗೆ ಪರೀಕ್ಷೆ ಮಾಡಿ ಉತ್ತೀರ್ಣರಾದವರಿಗೆ 'ನವಸಾಕ್ಷರ' ಪ್ರಮಾಣ ಪತ್ರವನ್ನೂ ನೀಡುತ್ತೇವೆ. | ಯೋಗಾನರಸಿಂಹ ಸ್ವಾಮಿ ಕೆ.ಎಂ. ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net