

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನದಿಂದ ಪ್ರಗತಿಪರ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯ. ಶರಣರ ವಚನಗಳನ್ನು ಅಧ್ಯಯನ ಮಾಡಿದರೆ ಸಾಲದು. ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಬಸವೇಶ್ವರ ಅಧ್ಯಯನ ಪೀಠದಲ್ಲಿ ಆಯೋಜಿಸಿದ್ದ ಶಂಕ್ರಪ್ಪ ತೇಲಿ ಮತ್ತು ಪರೂತಗೌಡರ ಚನ್ನಪ್ಪಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯನ್ನು ಮಾಡಿದರು. ವ್ಯಕ್ತಿ ತಾರತಮ್ಯ, ಶ್ರೇಣಿಕೃತ ಜಾತಿ ತಾರತಮ್ಯ, ದೇವರಲ್ಲಿನ ಬೇಧ ಭಾವ ಹೋಗಲಾಡಿಸಲು ಶ್ರಮಿಸಿದರು. ವಚನಗಳನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಪಚನಗೊಳಿಸಿಕೊಳ್ಳಬೇಕು ಎಂದರು.
ಪ್ರೊ. ವೀಣಾ ಹೂಗಾರ ಮಾತನಾಡಿ, ಶರಣರು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಹುಟ್ಟಿನಿಂದ ಬಂದ ಶ್ರೇಷ್ಠ, ಕನಿಷ್ಠ ಪರಿಕಲ್ಪನೆ ವಿರೋಧಿಸಿದರು. ಹೆಣ್ಣುಮಕ್ಕಳ ಸಮಾನತೆಗೆ ಧ್ವನಿ ಎತ್ತಿ ತಳ ಸಮುದಾಯವನ್ನು ಅಪ್ಪಿಕೊಂಡರು. ವಚನ ಸಾಹಿತ್ಯದಲ್ಲಿ ಶರಣರ ಕೊಡುಗೆ ಅಪಾರವಾದದ್ದು, ಶರಣರ ಆಶಯವನ್ನು ಅರ್ಥೈಸಿಕೊಂಡು ಓದುವ ಕೆಲಸವಾಗಬೇಕಿದೆ ಎಂದರು.
ಡಾ. ಮೃತ್ಯುಂಜಯ ಅಗಡಿ ಅಧ್ಯಕ್ಷತೆ ವಹಿಸಿದ್ದರು. ಬಸವ ಅಧ್ಯಯನ ವಿಭಾಗ ಸಂಯೋಜಕ ಡಾ. ಸಿ.ಎಂ. ಕುಂದಗೋಳ , ಡಾ. ಈರಣ್ಣ ಇಂಜಗನೇರಿ, ಕುಮಾರ ಮಂಗಳಗಟ್ಟಿ, ಶಂಕರ ಕುಂಬಿ, ದತ್ತಿದಾನಿಗಳಾದ ಕುಮಾರ ತೇಲಿ, ಸುಜಾತಾ ತೇಲಿ, ಇತರರು ಇದ್ದರು.
ನಂದಾ ಹೆಗ್ಗೇರಿ ನಿರೂಪಿಸಿದರು. ಭಾರ್ಗವಿ ವಂದಿಸಿದರು.