ಯುಕೆಪಿ ಗ್ಯಾರಂಟಿ ಅನುಷ್ಠಾನಗೊಳಿಸಿ

ಬಾಗಲಕೋಟೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಆಯುಕ್ತರ ಕಚೇರಿ ಎದುರು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ನೇತೃತ್ವದಲ್ಲಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು. ಪ್ರಕಾಶ ಅಂತರಗೊಂಡ, ಅಶೋಕ ಲಾಗಲೋಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಪೂಜಾರ ಇದ್ದರು.
ಬಾಗಲಕೋಟೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಆಯುಕ್ತರ ಕಚೇರಿ ಎದುರು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ನೇತೃತ್ವದಲ್ಲಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು. ಪ್ರಕಾಶ ಅಂತರಗೊಂಡ, ಅಶೋಕ ಲಾಗಲೋಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಪೂಜಾರ ಇದ್ದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅಡಿಯಲ್ಲಿ ಭೂಸ್ವಾಧೀನಕ್ಕೆ ಪ್ರಸಕ್ತ ವರ್ಷ ಹಣ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ನೇತೃತ್ವದಲ್ಲಿ ಮುಳುಗಡೆ ಸಂತ್ರಸ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಪುನರ್ವಸತಿ ಮತ್ತು ಪುನರ್ನಿರ್ಮಾಣ ಆಯುಕ್ತರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುವ ಮುನ್ನ ಸಂತ್ರಸ್ತರು ಹೋರಾಟ ನಡೆಸಿದರು.

ರಾಜ್ಯ ಸರ್ಕಾರ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬದ್ಧತೆ ತೋರಬೇಕು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ನೀರಾವರಿ ಒದಗಿಸಿ 5 ವರ್ಷಗಳಲ್ಲಿ ಯುಕೆಪಿ ಕಾಮಗಾರಿ ಪೂರ್ಣಗೊಳಿಸುವುದಾಗಿ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದ್ದ ವಾಗ್ದಾನದಂತೆ ಕಾಂಗ್ರೆಸ್ ನಡೆದುಕೊಳ್ಳಬೇಕು. ಯೋಜನಾ ವೆಚ್ಚ 78 ಸಾವಿರ ಕೋಟಿ ರೂ. ಪೈಕಿ 2023ನೇ ಸಾಲಿನಲ್ಲಿ 15,600 ಕೋಟಿ ರೂ. ಒದಗಿಸುವಂತೆ ಆಗ್ರಹಿಸಿದರು.

ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ ಮುಳುಗಡೆ ಆಗುವ ಎಲ್ಲ ಜಮೀನುಗಳನ್ನು ಏಕಕಾಲಕ್ಕೆ ಸ್ವಾಧೀನಪಡಿಸಿಕೊಂಡು ಅದಕ್ಕೆ ಬೇಕಾಗುವ ಅನುದಾನ ಮಂಜೂರು ಮಾಡಬೇಕು. ಈ ಹಿಂದೆ ಯೋಜನೆಯ 2ನೇ ಹಂತದಲ್ಲಿ ಪರಿಹಾರ ನೀಡಿದಾಗ ರೈತರಿಗೆ ಖರೀದಿ ಮಾಡಲು ಭೂಮಿ ಲಭ್ಯವಾಗದ ಹಿನ್ನೆಲೆಯಲ್ಲಿ ಹಣವನ್ನು ಬೇರೆ ಬೇರೆ ಕಾರಣಗಳಿಗೆ ಖರ್ಚು ಮಾಡಿದ ಶೇ.90 ಸಂತ್ರಸ್ತರ ಬದುಕು ಇವತ್ತು ಬೀದಿಪಾಲಾಗಿದೆ. ಅದು 3ನೇ ಹಂತದಲ್ಲೂ ಮರುಕಳಿಸಬಾರದು. ಹೀಗಾಗಿ ನೀರು ನಿಲ್ಲಿಸುವ 15 ವರ್ಷ ಮುಂಚಿತ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಮ್ಮ ಜಮೀನು ಸ್ವಾಧೀನವಾಗುತ್ತದೆ ಎಂದು ಈಗಾಗಲೇ ಅನೇಕ ಸಂತ್ರಸ್ತರು ಬೇರೆ ಕಡೆಗೆ ಜಮೀನು ಖರೀದಿಸಲು ಮುಂಗಡ ಹಣ ನೀಡಿದ್ದಾರೆ. ಪ್ರಸಕ್ತ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿ ಅದು ರದ್ದಾದರೆ ಈಗಾಗಲೇ ರೈತರು ಜಮೀನು ಖರೀದಿಸಲು ಕೊಟ್ಟಿರುವ ಮುಂಗಡ ಹಣ ಮುಟ್ಟುಗೋಲಾಗಿ ಅವರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಸರ್ಕಾರ ತಂದಿಡಬಾರದು. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರ ಪ್ರಸಕ್ತ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಬಾರದು ಎಂದು ಮನವಿ ಮಾಡಿದರು.

ಮುಖ್ಯವಾಗಿ ಯುಕೆಪಿ ಹಂತ-3ರ ಅಡಿಯಲ್ಲಿ ನಮ್ಮ ಪಾಲಿಗೆ ಹಂಚಿಕೆ ಆಗಿರುವ 130 ಟಿಎಂಸಿ ನೀರಿನ ಮೇಲಿನ ಹಕ್ಕು 2050ಕ್ಕೆ ಮುಕ್ತಾಯವಾಗುತ್ತದೆ. ಸದ್ಯ ನಮ್ಮ ಪಾಲಿನ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಕೂಡಲೇ ಸರ್ಕಾರ ನಮ್ಮ ಪಾಲಿನ 130 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡು ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ, ಅಶೋಕ ಲಾಗಲೋಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಪೂಜಾರ, ಬಸವರಾಜ ಮಲಕಗೊಂಡ, ಸಿದ್ದು ಜೀರಗಾವಿ, ನಿಂಗಣ್ಣ ಗೋಡಿ, ಪಾಂಡು ಸುನಗದ, ಮಹಾದೇವಪ್ಪ ಸೂಳಿಕೇರಿ, ಸಿದ್ದು ಬಾಲಗೊಂಡ, ಶಂಕ್ರಪ್ಪ ಬಾಲಗೊಂಡ, ವೀರುಪಾಕ್ಷಿ ಹಿರೇಮಠ, ಚಂದ್ರಶೇಖರ ಕಾಖಂಡಕಿ, ಈರಸಂಗಪ್ಪ ಹಳ್ಳಿ, ಸುಬ್ಬರಾಯಗೌಡ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net