

ಎನ್.ಆರ್.ಪುರ: ರಾಜ್ಯ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಗುರುವಾರ ತಾಲೂಕು ಕಚೇರಿ ಎದುರು ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ 27.50 ರಷ್ಟು ಹೆಚ್ಚಿಸಿ 2022ರ ಜುಲೈ 1ರಿಂದ ಅನ್ವಯವಾಗುವಂತೆ ವೇತನ ನಿಗದಿ ಪಡಿಸಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಎನ್‌ಪಿಎಸ್‌ನಿಂದ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಕಷ್ಟಕರವಾಗಿರುವುದರಿಂದ ಎನ್‌ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ತಾನ, ಚತ್ತೀಸ್‌ಘಡ ಮುಂತಾದ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆ ಕರ್ನಾಟಕ ರಾಜ್ಯದಲ್ಲೂ ಎನ್‌ಪಿಎಸ್ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಎನ್.ಪಿ.ಎಸ್.ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ತಹಸೀಲ್ದಾರ್ ತನುಜ.ಟಿ.ಸವದತ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುಭಾಷ್, ನಿರ್ದೇಶಕ ಬೋಗೇಶ್, ಸಂಘದ ರಾಜ್ಯ ಪರಿಷತ್ ಸದಸ್ಯ ಕೃಷ್ಣಪ್ಪ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ಕಾರಿ ನೌಕರರು ಇದ್ದರು.