ಕಾಂತರಾಜ್ ಆಯೋಗದ ವರದಿ ಜಾರಿಗೆ ತನ್ನಿ; ದಲಿತ ಮುಖಂಡ ಮಾವಳ್ಳಿ ಶಂಕರ ಆಗ್ರಹ

MAVALLI SHANKAR PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಸುದ್ದಿಗೋಷ್ಠಿ ನಡೆಸಿದರು. ಸೋಮನಾಥ ಕಳ್ಳಿಮನಿ, ಎಸ್.ಎಂ. ಪಾಟೀಲ ಗಣಿಹಾರ, ಪ್ರಭುಗೌಡ ಪಾಟೀಲ ಇದ್ದಾರೆ.
Published on

ವಿಜಯಪುರ: ಎಷ್ಟೇ ಒತ್ತಡ ಬಂದರೂ, ವಿರೋಧ ಎದುರಾದರೂ ಸಿಎಂ ಸಿದ್ದರಾಮಯ್ಯನವರು ಕಾಂತಾರಾಜ್ ಆಯೋಗದ ವರದಿ ಜಾರಿಗೊಳಿಸಲೇಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಆಗ್ರಹಿಸಿದರು.

ಜಾತಿಗಣತಿ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ತಿಳಿಸಿತ್ತು. ಆದರೂ, ಕಾಂಗ್ರೆಸ್‌ನ ಕೆಲವು ಶಾಸಕರು ಮತ್ತು ಸಚಿವರು ವಿರೋಧ ಮಾಡುತ್ತಿರುವುದು ಖಂಡನೀಯ. ಶಾಮನೂರ ಶಿವಶಂಕರಪ್ಪ ಅವರಂಥ ಬಲಿಷ್ಠ ಸಮುದಾಯಗಳ ನಾಯಕರು ಬಾಲಿಷವಾಗಿ ಮಾತನಾಡುತ್ತಿರುವುದು ಸರಿಯಲ್ಲ. ವರದಿಯಲ್ಲಿ ಸಣ್ಣಪುಟ್ಟ ಲೋಪದೋಷ ಇದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಅದನ್ನು ಬಿಟ್ಟು ಇಡೀ ವರದಿಯನ್ನೇ ತಿರಸ್ಕರಿಸುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಅವರು ಇಂಥದಕ್ಕೆಲ್ಲ ಅವಕಾಶ ನೀಡಬಾರದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಸ್ವಾತಂತ್ರ್ಯಪೂರ್ವ ದಲ್ಲಿಯೇ ದಮನಿತ ಸಮುದಾಯಗಳಿಗೆ ಎಲ್ಲ ರೀತಿಯ ನಾಗರಿಕ ಹಕ್ಕು ನೀಡುವುದಕ್ಕಾಗಿ ಬ್ರಿಟಿಷ್ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸಿತ್ತು. ಸ್ವಾತಂತ್ರ್ಯ ನಂತರ ಸಂವಿಧಾನ ಬದ್ಧವಾಗಿ ದಲಿತರಿಗೆ ಮೀಸಲಾತಿ ನೀಡಲಾಯಿತು. 1972 ರಲ್ಲಿ ಭಾರತದಲ್ಲಿ ಮೊದಲ ಜನಗಣತಿ ಆಯಿತು. ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡುವ ಉದ್ದೇಶಕ್ಕಾಗಿ 1945 ರಲ್ಲಿ ಕಾಕಾ ಕಾಲೆಕರ ಆಯೋಗ ರಚಿಸಲಾಯಿತು. ಆ ಆಯೋಗ ಶೇ.75 ರಷ್ಟು ಮೀಸಲಾತಿ ಕೊಡಬೇಕೆಂಬ ವರದಿ ನೀಡಿತು. ನಂತರ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ್ ಒಡೆಯರ ಮೀಸಲಾತಿ ವ್ಯವಸ್ಥೆ ನೀಡಲಾಯಿತು. ಸ್ಥಳೀಯ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದಾಗ ಶೇಷಾದ್ರಿ ಅಯ್ಯರ್ ನಂತರ ವಿಶ್ವೇಶರಯ್ಯ ಅವರಿಗೂ ಆದ್ಯತೆ ನೀಡಿದರು. ಬ್ರಾಹ್ಮೇಣತರರಿಗೆ ಮೀಸಲಾತಿ ಕೊಡುವ ವ್ಯವಸ್ಥೆ ಮೈಸೂರು ಪ್ರಾಂತ್ಯದಲ್ಲಿ ಬಂದಿತು. ಆಡಳಿತದಲ್ಲಿಯೂ ಮೀಸಲಾತಿ ಸಿಕ್ಕಿತು. ಆ ನಂತರ ಮೀಸಲಾತಿ ವ್ಯವಸ್ಥೆ ಕಾಲಕ್ರಮೇಣ ಜಾರಿಗೆ ಬಂದಿದೆ ಎಂದು ವಿವರಿಸಿದರು.

2015 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾಂತರಾಜು ಆಯೋಗ ನೇಮಕ ಮಾಡಿದ ಮೇಲೆ ಸುಮಾರು 150 ಕೋಟಿ ಅನುದಾನ ನೀಡಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಪ್ರತಿಯೊಂದು ಸಮುದಾಯದ ಮಾಹಿತಿ ಸಂಗ್ರಹಿಸಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬಿಇಎಲ್ನಂಥ ಸಂಸ್ಥೆಗಳು ಸಹ ವರದಿ ಅಧಿಕೃತ ಹಾಗೂ ವೈಜ್ಞಾನಿಕವಾಗಿದೆ ಎಂದು ದೃಢೀಕರಿಸಿತು. ಆದರೆ, ಅನುಷ್ಟಾನ ಸಂದರ್ಭ ಸರ್ಕಾರಗಳು ಬದಲಾದವು. ಹೀಗಾಗಿ ಯಾರೂ ಮುಟ್ಟಲಿಲ್ಲ. ಆ ಬಳಿಕ ಪ್ರಗತಿಪರರು, ಶೋಷಿತ ಸಮುದಾಯಗಳು ಒಟ್ಟಾಗಿ ಹೋರಾಟ ಮಾಡಿದ ಪರಿಣಾಮ ಇದೀಗ ಚರ್ಚೆಗೆ ಬಂದಿದೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಕೂಡ ಆಗಿದೆ. ಲೋಪದೋಷ ಇದ್ದಾಗ ಸರಿಪಡಿಸುವ ಮಾನದಂಡ ಅಳವಡಿಸಿಕೊಳ್ಳಬಹುದು. ನೂರಕ್ಕೆ ನೂರು ಸರಿಯಿರಲು ಸಾಧ್ಯವಿಲ್ಲ. ಎಲ್ಲೋ ಅಲ್ಪಸ್ವಲ್ಪ ಲೋಪ ಇದ್ದರೂ ಅದನ್ನು ಸರಿಪಡಿಸಿಕೊಂಡು ಹೋಗುವ ಕೆಲಸ ಆಗಬೇಕೆಂದರು.

ಬಿಹಾರದ ನಿತೀಶಕುಮಾರ ಸರ್ಕಾರ ಕೂಡ ಜಾತಿಗಣತಿ ವರದಿ ಜಾರಿ ಮಾಡಿದ ಹಿನ್ನೆಲೆ ಕೇಂದ್ರ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡಿದೆ. ಚುನಾವಣೆ ಹಿನ್ನೆಲೆ ಜಾತಿಗಣತಿಗೆ ಮುಂದಾಗಿದೆ. ಇಷ್ಟು ದಿನ ಜಾತಿಗಣತಿಯನ್ನೇ ವಿರೋಧಿಸಿದ್ದ ಸರ್ಕಾರ ಇದೀಗ ಜಾತಿಗಣತಿ ಮಾಡುವುದಾಗಿ ಹೇಳಿದ್ದು ಕೇವಲ ಚುನಾವಣೆ ಗಿಮಿಕ್ ಎಂದ ಮಾವಳ್ಳಿ ಶಂಕರ ಅವರು, ಬಿಜೆಪಿ ಸರ್ಕಾರ ಕಣ್ಣೊರೆಸುವ ತಂತ್ರ ಬಿಡಬೇಕು. ಕೂಡಲೇ ಅದಕ್ಕೊಂದು ಸ್ಪಷ್ಟತೆ ನೀಡಬೇಕೆಂದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬದ್ಧತೆ ಇದ್ದರೆ ಕೇಂದ್ರ ಸರ್ಕಾರ ಕಾಲಮಿತಿ ನಿಗದಿ ಮಾಡಬೇಕು. ಅನುದಾನದ ಸ್ಪಷ್ಟತೆ ನೀಡಬೇಕು. ಚುನಾವಣೆ ಹಿನ್ನೆಲೆ ಘೋಷಿಸಿ ನಂತರ ತಳ್ಳಿಕೊಂಡು ಹೋಗುವ ಕೆಲಸ ಆಗಬಾರದು ಎಂದರು.

ಅಹಿಂದ ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಪ್ರಭುಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net