

ವಿಜಯಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯ ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಸಂಬಂಧಿಸಿದ ಅಧಿಕಾರಿಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರವಾರ ಸಂಜೆ ನಡೆದ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರ ಆರೋಗ್ಯ ತಪಾಸಣೆ 12 ರಿಂದ 14 ಬಾರಿ ನಿಯಮಿತವಾಗಿ ಕೈಗೊಳ್ಳಬೇಕು. ಅನೀಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸಬೇಕು. ಜಿಲ್ಲೆಯಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆರ್‌ಸಿಎಚ್ ಪೋರ್ಟಲ್ ಮೂಲಕ ಗರ್ಭಿಣಿಯರಿಗೆ ಕಾಲ-ಕಾಲಕ್ಕೆ ಆರೋಗ್ಯದ ಕುರಿತಾಗಿ ತಿಳಿವಳಿಕೆ ನೀಡುವಂತೆ ಅವರು ಸೂಚನೆ ನೀಡಿದರು.
ಹೆರಿಗೆಯ ನಂತರ ಮಗುವಿಗೆ ಒಂದು ವರ್ಷ ತುಂಬುವವರೆಗೆ ಪಡೆದುಕೊಳ್ಳಬೇಕಾದ ಆರೋಗ್ಯ ಚಿಕಿತ್ಸೆ, ಔಷಧೋಪಚಾರ, ಲಸಿಕೆ ಸೌಲಭ್ಯಗಳ ಮಾಹಿತಿ ಒದಗಿಸಬೇಕು. ಆರೋಗ್ಯ ಸೇವಾ ಸೌಲಭ್ಯಗಳ ಮಾಹಿತಿ ನೀಡಬೇಕು. ಗರ್ಭಿಣಿಯರ ಅಗತ್ಯ ಮಾಹಿತಿಯನ್ನು ನಿಯಮಿತವಾಗಿ ನೋಂದಣಿ ಮಾಡಬೇಕು. ಆಶಾ ಕಾರ್ಯಕರ್ತೆಯರ ಮನೆಮೆನೆಗೆ ಭೇಟಿ ನೀಡಿ, ಸಕಾಲದಲ್ಲಿ ಆರೋಗ್ಯ ಸೇವೆ ನೀಡಬೇಕು. ನಿರ್ಲಕ್ಷ್ಯವಹಿಸಬಾರದು ಎಂದರು.
ಗುಣಾತ್ಮಾಕ ಆರೋಗ್ಯ ಸೇವೆ, ಪ್ರಸವ ಪೂರ್ವ ಆರೈಕೆ, ಗಂಡಾಂತರ ಗರ್ಭಿಣಿ ಹೆರಿಗೆಗಳನ್ನು ಗುರುತಿಸಿ ಅವರಿಗೆ ಪ್ರಸೂತಿ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮೂಲಕ ಶೇ.100ರಷ್ಟು ಹೆರಿಗೆಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್ ಗುಣಾರಿ ಅವರು ಸಭೆಗೆ ಮಾಹಿತಿ ನೀಡಿದರು.
ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳ ಹಾಗೂ ಅಲ್ಲಿ ನೀಡುವ ಗುಣಮಟ್ಟದ ಆರೋಗ್ಯ ಸೇವೆಗಳು, ಪ್ರಸವ ಪೂರ್ವ ಮತ್ತು ಪ್ರಸವೋತ್ತರ ಆರೈಕೆ ಮೂಲಕ ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಆಗದಂತೆ ಸಹಕಾರಿಯಾಗಿದೆಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಪರಶುರಾಮ ಹಿಟ್ನಳ್ಳಿ ಅವರು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಎಸ್.ಎಲ್. ಲಕ್ಕಣ್ಣವರ ಮತ್ತಿತರರಿದ್ದರು.