ಜಮೀನಿನಲ್ಲಿ ಟಿಸಿ ಅಳವಡಿಸಿ

TKE mescom
ಮೆಸ್ಕಾಂ ಜನಸಂಪರ್ಕ ಸಭೆ.
Published on

ತರೀಕೆರೆ: ಅರ್ಜಿ ಸಲ್ಲಿಸಿ ವರ್ಷ ಕಳೆದಿದ್ದರೂ ಜಮೀನಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ ಎಂದು ದೋರನಾಳು ಗ್ರಾಮದ ರೈತ ತಿಪ್ಪೇಶಪ್ಪ ದೂರಿದರು.

ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಗುರುವಾರ ಉಪ ವಿಭಾಗೀಯ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಟಿಸಿ ಅಳವಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು, ಅರ್ಜಿ ಸಲ್ಲಿಸಿರುವವರ ಜಮೀನು, ತೋಟಗಳಲ್ಲಿ ಟಿಸಿ ಅಳವಡಿಸಲು 2018ನೇ ಸಾಲಿನವರೆಗೆ ಮಾತ್ರ ಟೆಂಡರ್ ಆಗಿದೆ. ಜ್ಯೇಷ್ಠತೆ ಅನುಸಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸರದಿಯಂತೆ ಟಿಸಿ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ದೋರನಾಳು, ಸುಣ್ಣದಹಳ್ಳಿ ಸೇರಿ ತಾಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ತಂತಿಗಳು, ಟಿಸಿಗಳಿಗೆ ಗಿಡಗಂಟಿ ಹಬ್ಬಿಕೊಂಡಿದೆ. ಮಳೆಗಾಲವಾಗಿರುವುದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ತುರ್ತಾಗಿ ಬಳ್ಳಿ ತೆರವುಗೊಳಿಸಬೇಕು ಎಂದು ದೋರನಾಳು ಗ್ರಾಮಸ್ಥರು ಮನವಿ ಮಾಡಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು ಮಾತನಾಡಿ, ಜಂಗಲ್ ತೆರವುಗೊಳಿಸಲು ಮಾನ್‌ಸೂನ್ ಗ್ಯಾಂಗ್ ನೇಮಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಗಿಡಗಂಟಿ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ಚಂದಪ್ಪ ಮಾತನಾಡಿ, ತಂತಿ ಪದೇಪದೆ ತುಂಡಾಗಿ ಸಮಸ್ಯೆ ಉದ್ಭವಿಸುತ್ತಿದ್ದ ವಿಷಯ ಕಳೆದ ಸಭೆಯಲ್ಲಿ ಚರ್ಚಿಸಿದ್ದರಿಂದ ದೋರನಾಳು ಗ್ರಾಮದಿಂದ ನಂದಿ, ಸುಣ್ಣದಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರ‌್ಯಾಬಿಟ್ ವೈರ್ ಅಳವಡಿಸಲಾಗಿದೆ. ಇದರಿಂದ ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿದರು.
ಮೆಸ್ಕಾಂ ಎಇಇ ಜೆ.ಅಜೇಯ್, ಶಾಖಾಧಿಕಾರಿಗಳಾದ ರಂಗೇಗೌಡ, ತಿಪ್ಪೇಶಪ್ಪ, ರಘುನಂದನ್, ಗುರುಪಾದಪ್ಪ, ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net