ಕಾರ್ಮಿಕರ ಆರನೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿ

ckm cpi po
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಚ್.ಎಂ.ರೇಣುಕಾರಾಧ್ಯ, ರಾಧಾ ಸುಂದರೇಶ್, ರಮೇಶ್, ಮಂಜೇಗೌಡ, ವಿಜಯ್‌ಕುಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ವಸತಿ ಸಮಸ್ಯೆ ಎದುರಿಸುತ್ತಿರುವ ಅರ್ಹರಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ನಿವೇಶನ ಇಲ್ಲದೆ ವಾಸಿಸುತ್ತಿವೆ. ಚುನಾವಣಾ ಪೂರ್ವದಲ್ಲಿ ನೀಡಿದಂತಹ 6ನೇ ಗ್ಯಾರಂಟಿ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದಾರೆ. ಇದರಲ್ಲಿ ಕಾರ್ಮಿಕ ಸಮುದಾಯ ಬಹಳಷ್ಟು ಶ್ರಮ ವಹಿಸಿದೆ. ಅಸಂಘಟಿತ ಕಾರ್ಮಿಕರಿಗಾಗಿ ಘೋಷಿಸಿದ್ದ 6ನೇ ಗ್ಯಾರಂಟಿಯನ್ನು ಕೂಡಲೇ ಜಾರಿಗೊಳಿಸಬೇಕು. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ 6 ಸಾವಿರ ರೂ. ಗೌರವಧನ ಹೆಚ್ಚಿಸಬೇಕು. ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಯುಜಿಡಿ ಕಾಮಗಾರಿಯಲ್ಲಿ ಅನುದಾನ ದುರುಪಯೋಗವಾಗಿರುವ ಅನುಮಾನವಿದೆ. ಆದ್ದರಿಂದ ಕಾಮಗಾರಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ನಗರ ಪ್ರದೇಶದಲ್ಲಿ ಹಲವು ವರ್ಷಗಳಿಂದ ಮನೆ, ನಿವೇಶನ ಇಲ್ಲದವರಿಗೆ ಫ್ಲ್ಲಾಟ್ ನಿರ್ಮಿಸಿಕೊಡುವುದಾಗಿ ಜನರಿಂದ ಹಣ ಹಾಗೂ ಅರ್ಜಿ ತೆಗೆದುಕೊಂಡಿದ್ದರೂ ಇದುವರೆಗೆ ನೀಡಿಲ್ಲ. ಫ್ಲಾಟ್ ನೀಡುವ ಬದಲು ನಿವೇಶನ ನೀಡುವುದು ಸೂಕ್ತ. ರಾಜ್ಯದ ಪೌರಕಾರ್ಮಿಕರ ಸೇವೆ ಕಾಯಂಗೊಳಿಸಿ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಿಪಿಐ ಸಂಪೂರ್ಣ ಬೆಂಬಲ ಸೂಚಿಸಿತ್ತು. ಹೀಗಾಗಿ ಸರ್ಕಾರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಮೇಶ್ ಕೆರೆಮಕ್ಕಿ, ಯಡದಾಳು ಕುಮಾರ್, ಮಂಜೇಗೌಡ, ವಿಜಯ್‌ಕುಮಾರ್, ಸೋಮೇಗೌಡ, ಲೋಬೋ, ಜಯನಂದ್, ಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net