

ಬೆಂಗಳೂರು : ರಾಜ್ಯದ ವಿವಿಧ ಜಲಾಶಯಗಳ ನೀರನ್ನು ಮತ್ತು ನ್ಯಾಯಾಲಯವು ಅಥವಾ ಜಲವಿವಾದ ನ್ಯಾಯಾಧಿಕರಣವು ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನೂತನ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಚಿವರಾದ ನಂತರ ಕರ್ನಾಟಕ ನೀರಾವರಿ ನಿಗಮದಲ್ಲಿಂದು ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಪ್ರಥಮ ಸಭೆ ನಡೆಸಿದ ಅವರು, ಪ್ರಗತಿ ಪರಿಶೀಲನೆ ನಡೆಸಿದರು. ಪ್ರಸಕ್ತ ಆಯವ್ಯಯದಲ್ಲಿ ನೀರಾವರಿಗೆ 18,702 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಜುಲೈ ಅಂತ್ಯಕ್ಕೆ 5,053 ಕೋಟಿ ರೂ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು ಎಂದರು.
ರಾಜ್ಯದಲ್ಲಿ 140 ಲಕ್ಷ ಹೆಕ್ಟೇರ್ ಪ್ರದೇಶವು ವ್ಯವಸಾಯಕ್ಕೆ ಯೋಗ್ಯವಾಗಿದ್ದು, ಅದರಲ್ಲಿ 40.66 ಲಕ್ಷ ಹೆಕ್ಟೇರ್ ಪ್ರದೇಶವು ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಇಲಾಖೆಯ ಯೋಜಿತ ನೀರಾವರಿ ಕ್ಷೇತ್ರವಾಗಿದೆ. ಅದರಲ್ಲಿ 29.18 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗದಂಥ ನೀರಿನ ಸದ್ಬಳಕೆಯಾಗುವ ಯೋಜನೆಗಳನ್ನು ರೂಪಿಸಬೇಕು. ಕೆರೆಗೆ ನೀರು ತುಂಬುವ ಯೋಜನೆ, ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಲಕ್ಷಣ ರಾವ್ ಪೇಶ್ವೆ, ಕೆಎನ್ಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಚಿಣಿ, ಅಪರ ಕಾರ್ಯದರ್ಶಿ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಬಸವರಾಜಯ್ಯ, ಪ್ರಧಾನ ಇಂಜಿನಿಯರ್ ಸಿದ್ದಗಂಗಪ್ಪ, ಉಪಕಾರ್ಯದರ್ಶಿ ಕಿರಣ್ ಮಸೂತಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.