ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸಿ

PROTEST
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೆ ತರುವ ಮೂಲಕ ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯ ಮುಖಂಡ ಹರಿಹರ ಆನಂದಸ್ವಾಮಿ ಮನವಿ ಮಾಡಿದರು.


ಬ್ರಿಟಿಷ್ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ಹಾಗೂ ಸ್ವಾತಂತ್ರ್ಯಾ ನಂತರ ಸಂವಿಧಾನದಲ್ಲಿ ಅಸ್ಪೃಶ್ಯ ದಲಿತರನ್ನು ಮಾತ್ರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ರಾಜಕೀಯ ಕಾರಣದಿಂದಾಗಿ ಸ್ಪೃಶ್ಯ ಜಾತಿಗಳನ್ನು ಸಹ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಅಸ್ಪೃಶ್ಯ ದಲಿತರನ್ನು ವಂಚಿಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ರಾಜ್ಯದಲ್ಲಿಯೂ ಸ್ಪೃಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಮ ಮತ್ತು ಕೊರಚರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ ಊರಿಂದಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ದಲಿತರನ್ನು ವಂಚಿಸಲಾಗಿದೆ. ಈ ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಫಲವಾಗಿ ಆಯೋಗವೊಂದನ್ನು ರಚಿಸಲಾಗಿತ್ತು. ಆದರೆ ಸ್ಪೃಶ್ಯರಾದ ಭೋವಿ, ಲಂಬಾಣಿ, ಕೊರಮ ಮತ್ತು ಕೊರಚ ಸಮುದಾಯಗಳು ಇದನ್ನು ವಿರೋಧಿಸಿ, ಶಿಫಾರಸನ್ನು ವಾಪಸ್ ಪಡೆಯಲು ಒತ್ತಾಯಿಸಿರುವುದು ಬೇಸರದ ಸಂಗತಿಯಾಗಿದೆ ಎಂದರು.


ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕು. ಪರಿಶಿಷ್ಟರೊಳಗೆ ಅಂತರ್ಜಾತಿ ವಿವಾಹ ಕಡ್ಡಾಯಗೊಳಿಸಬೇಕು. ಸ್ಪೃಶ್ಯ ಸಮುದಾಯ ಮತ್ತು ಅಸ್ಪೃಶ್ಯ ಸಮುದಾಯಗಳ ನಡುವೆ ಸ್ಪಷ್ಟ ಗೆರೆ ಹಾಕಬೇಕು. ಅಸ್ಪೃಶ್ಯ ದಲಿತರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net