ನ್ಯಾ.ಕಾಂತರಾಜು ಆಯೋಗದ ವರದಿ ಜಾರಿಗೊಳಿಸಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಒತ್ತಾಯ

83
Published on

ಮೈಸೂರು: ಹಿಂದುಳಿದ ವರ್ಗಗಳ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ನ್ಯಾಯಮೂರ್ತಿ ಕಾಂತರಾಜು ನೇತೃತ್ವದ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಒತ್ತಾಯಿಸಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ಭಾರತೀಯ ಪರಿವರ್ತನ ಸಂಘದಿಂದ ನಗರದ ಅಶೋಕಪುರಂ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂತರಾಜು ವರದಿ ಒಂದು ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾ.ಕಾಂತರಾಜು ಆಯೋಗದ ವರದಿಯಲ್ಲಿ ಶೈಕ್ಷಣಿಕ ಹಾಗೂ ಜನಗಣತಿ ವರದಿ ಮಾಡಲಾಗಿದ್ದು, ಜಾತಿಗಣತಿ ಮಾಡಿಲ್ಲ. ಈ ವರದಿಯನ್ನು 2015ರಲ್ಲಿಯೇ ಸರ್ಕಾರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವರು ಈ ವರದಿ ಅವೈಜ್ಞಾನಿಕವಾಗಿದೆ ಎಂದು ವಿರೋಧ ಮಾಡುತ್ತಿರುವುದರಿಂದ ಇನ್ನೂ ಬಿಡುಗಡೆಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1300ಕ್ಕೂ ಹೆಚ್ಚು ಹಿಂದುಳಿದ ಜಾತಿಗಳಿವೆ. ಹಿಂದುಳಿದ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ತರಲು ಬೇಕಾದ ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಕುರಿತು ವರದಿ ಮಾಡಲಾಗಿದೆ. ಈ ವರದಿಯನ್ನು ಎಲ್ಲ ವರ್ಗದವರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಎರಡು ಸಮುದಾಯವರು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದರು.
ನ್ಯಾ.ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದರೆ, ಹಿಂದುಳಿದ ವರ್ಗಗಳಿಗೆ ಸವಲತ್ತು, ಅವಕಾಶ ಸಿಗಲಿದೆ. ಹಾಗಾಗಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾಗಿರುವುದರಿಂದ ಕೂಡಲೇ ವರದಿ ಜಾರಿಗೊಳಿಸಬೇಕು. ವರದಿ ಬಿಡುಗಡೆಯಾದ ನಂತರ ಅದರ ಅಧ್ಯಯನ ಮಾಡಿ, ಸರ್ಕಾರದ ಗಮನ ಸೆಳೆಯಬೇಕು. ಅವೈಜ್ಞಾನಿಕವಾಗಿದೆ ಎಂದು ವಿರೋಧ ಮಾಡುತ್ತಿರುವವರಿಗೆ ವರದಿಯ ಬಗ್ಗೆ ಚರ್ಚೆಯಾಗುವಂತೆ ಮಾಡಬೇಕು ಎಂದು ಹೇಳಿದರು.
ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎನ್.ಎಸ್. ಗೋಪಿನಾಥ್, ಎಎಪಿ ರಾಜ್ಯ ಕಾರ್ಯದರ್ಶಿ ಸೋಸಲೆ ಸಿದ್ದರಾಜು, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫಾತ್‌ಖಾನ್, ಮೈಸೂರು ನಾಗರಿಕ ವೇದಿಕೆ ಸಂಚಾಲಕಿ ಎಚ್.ಎಲ್.ಯಮುನಾ, ಮಾನವ ಬಂಧುತ್ವ ವೇದಿಕೆ ಸಂಚಾಲಕ ದ್ಯಾವಪ್ಪನಾಯಕ, ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್, ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಜೇಸುದಾಸ್, ಎಎಪಿ ರೈತ ಘಟಕದ ಜಿಲ್ಲಾಧ್ಯಕ್ಷ ಹನುಮಯ್ಯ, ಮಂಡ್ಯ ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಮಂಗಲ, ಭಾರತೀಯ ಪರಿವರ್ತನ ಸಂಘದ ಮುಖಂಡರಾದ ಜಯಶಂಕರ್ ಮೇಸ್ತ್ರಿ, ಮಹದೇವು, ಶಾಶ್ವತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮೈಸೂರು ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net