

ವಿಜಯವಾಣಿ ಸುದ್ದಿಜಾಲ ಶಿರಾ
ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ತಕ್ಷಣವೇ ಜಾರಿ ಮಾಡಬೇಕು ಎಂದು ಮಾದಿಗ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಂಗನಾಥ್ ಒತ್ತಾಯಿಸಿದರು. ಒಳಮೀಸಲಾತಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮಾದಿಗ ಮಹಾಸಭಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ದಂಡುವತಿಯಿಂದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ತುಮಕೂರು ನಿವಾಸದವರೆಗೆ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾಕ್ಕೆ ಭಾನುವಾರ ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ ಮಾತನಾಡಿದರು.
ವಿಧಾನ ಮಂಡಲದ ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ ಹಾಗೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪ ಪಂಗಡಗಳಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಪಣಾಳಿಕೆ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಿಳಿಸಿದ್ದರು. ಈಗ ಸುಪ್ರೀಂ ಕೋರ್ಟ್ ಒಳಮೀಸಲಾತಿಗೆ ಅಸ್ತು ಎಂದಿದ್ದು, ವರದಿ ಅನುಷ್ಠಾನಕ್ಕೆ ಡಾ.ಜಿ.ಪರಮೇಶ್ವರ ಅವರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು. ವಕೀಲ ರಂಗಾಧಮಯ್ಯ ಮಾತನಾಡಿ, ಒಳಮೀಸಲಾತಿಗಾಗಿ ಮಾದಿಗ ಸಮುದಾಯ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಸಮುದಾಯ ಅತ್ಯಂತ ಹಿಂದುಳಿದ್ದು, ಅತಿ ಹೆಚ್ಚು ಮತಬ್ಯಾಂಕ್ ಹೊಂದಿದೆ. ಆದರೂ ಮೀಸಲಾತಿಯಲ್ಲಿ ಸಂವಿಧಾನಿಕ ನ್ಯಾಯ ಸಿಕ್ಕಿಲ್ಲ. ಒಳಮೀಸಲಾತಿ ಜಾರಿಯಾದರೆ ಮಾದಿಗ ಸಮುದಾಯ ಸಮಾಜ ಮುನ್ನಲೆಗೆ ಬರಲಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಕುಮಾರ್ ಮಾತನಾಡಿ, ಒಳಮೀಸಲಾತಿ ಒತ್ತಾಯಿಸಿ ಬಹುಸಂಖ್ಯಾತ ಮಾದಿಗ ಜನಾಂಗದ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಪಾದಯಾತ್ರೆ, ಬೈಕ್ ಜಾಥಾ, ಧರಣಿ, ಸತ್ಯಾಗ್ರಹಗಳನ್ನು ನಡೆಸಿದ್ದೇವೆ. ಮೂರು ದಶಕಗಳ ಕಾಲ ಸಮುದಾಯ ಸುದೀರ್ಘ ಹೋರಾಟ ಮಾಡುತ್ತ ಬಂದಿದೆ. ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ತೀರ್ಪು ನೀಡಿದ್ದು, ತೀರ್ಪು ಬಂದ ಒಂದೇ ದಿನದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಮೊದಲು ನಾವೇ ಒಳಮೀಸಲಾತಿ ಅಂಗೀಕರಿಸುವುದಾಗಿ ವಿಧಾನಸಭೆ ಸದನದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಇದುವರೆಗೂ ಒಳಮೀಸಲಾತಿ ಬಗ್ಗೆ ಮೌನ ವಹಿಸಿದೆ. ಇನ್ನಾದರೂ ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ಮೀಸಲಾತಿ ಜಾರಿಗೆ ಕ್ರಮವಹಿಸಬೇಕು ಎಂದರು.
ಜಾಥಾದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಮಂಜುನಾಥ್, ಪ್ರಚಾರ ಸಮಿತಿ ವೀರ ಖ್ಯಾತಯ್ಯ, ಕಾರ್ಯದರ್ಶಿ ನಾಗರಾಜ್.ಎಸ್, ಪಟ್ಟನಾಯಕನಹಳ್ಳಿ ಹನುಮಂತ, ಚಂದ್ರಣ್ಣ, ದಲಿತ ಮುಖಂಡರಾದ ಭರತ್ ಕುಮಾರ್, ಶಿವಕುಮಾರ್, ಮಹಾಲಕ್ಷ್ಮೀ, ನಾಗೇಂದ್ರ, ನಾದೂರು ಕಿರಣ, ರಾಜೇಶ್ ಇತರರು ಇದ್ದರು.