

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಅಂಗವಿಕಲರ ಅಭ್ಯುದಯಕ್ಕಾಗಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿ
ತಾಲೂಕು ವಿಕಲಚೇತನರ ಒಕ್ಕೂಟದ ಸದಸ್ಯರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ವಿಕಲಚೇತನರ ಸಂಸ್ಥೆಯ ಕಾರ್ಯದರ್ಶಿ ಕಿರಣ್ ನಾಯಕ್ ಮಾತನಾಡಿ, ರಾಜ್ಯದಲ್ಲಿ 18 ಲಕ್ಷದಷ್ಟಿರುವ ಅಂಕವಿಕಲರನ್ನು ಸರ್ಕಾರ ಕಡೆಗಣಿಸಿದೆ. ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಅಂಗವಿಕಲರ ಅಭ್ಯುದಯಕ್ಕಾಗಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಂಡು ಏಳಿಗೆಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಹಾಗೂ ಸ್ಥಳಿಯ ಸಂಸ್ಥೆಗಳಲ್ಲಿ ಶೇ.3 ಅನುದಾನವನ್ನು ಅಂಗವಿಕಲರ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ನಿಯಮವಿದ್ದರೂ ಇದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ಅಂಗವಿಕಲರ ನಿರ್ದೇಶನಾಲಯವನ್ನು ಪ್ರತ್ಯೇಕ ನಿಗಮ ಮಂಡಳಿಯಾಗಿ ಪರಿವರ್ತಿಸಬೇಕು. ಶೇ.3 ಮೀಸಲಾತಿಯನ್ನು ಶೇ.5ಕ್ಕೆ ಏರಿಸಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಗೌರವ ಧನವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು, ಅಂಗವಿಕಲರಿಗೆ ರಾಜಕೀಯ ಮೀಸಲಾತಿ ಜಾರಿಗೆ ತರಬೇಕು. ಸ್ಥಳಿಯ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಹಾಗೂ ಸ್ಥಾಯಿ ಸಮಿತಿಗಳಿಗೆ ಅರ್ಹ ಅಂಗವಿಕಲರನ್ನು ನೇಮಿಸಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿಯೂ ಅಂಗವಿಕಲರ ಪುನರ್ವಸತಿ ಕೇಂದ್ರ ತೆರೆಯಬೇಕು. ಅಂಗವಿಕಲರ ಒಕ್ಕೂಟಗಳಿಗೆ ವಿಶೇಷ ಅನುದಾನ ನೀಡಬೇಕು ಹಾಗೂ ಭವನ ನಿಮಾರ್ಣಕ್ಕೆ ಉಚಿತ ನಿವೇಶನ ನೀಡಲು ಕ್ರಮ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಪ್ರಶಾಂತ್ ಕೆ.ಪಾಟೀಲ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಸ್ಥೆ ಅಧ್ಯೆ ಸೌಭಾಗ್ಯಮ್ಮ, ಉಪಾಧ್ಯಕ್ಷ ಕೆ.ಎಲ್.ಸುಬ್ರಹ್ಮಣ್ಯಮ್, ತಾಲೂಕು ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷರಾದ ಆದಿನಾರಾಯಣಪ್ಪ, ವೆಂಕಟರಮಣಪ್ಪ, ಕೃಷ್ಣಪ್ಪ ಸೇರಿದಂತೆ ಸಂಸ್ಥೆಯ ಮತ್ತಿತರ ಪದಾಧಿಕಾರಿಗಳು ಇದ್ದರು.