

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಡಾನೆ ಹಾವಳಿ ತಡೆ ಕುರಿತು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳ ಕಾಫಿ ಬೆಳೆಗಾರರಿಗೆ ಮತ್ತು ರೈತರಿಗೆ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ತೊಂದರೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕಿದೆ ಎಂದರು.
ಕಾಡಾನೆ ಹಾವಳಿ ತಪ್ಪಿಸಲು ಬ್ಯಾರಿಕೇಡ್ ನಿರ್ಮಾಣ ಹಾಗೂ ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಪ್ರತ್ಯೇಕ ವನ್ಯ ಜೀವಿ ಉಪ ವಿಭಾಗ ಕಚೇರಿಯನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದರು.
ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಇತ್ತೀಚೆಗೆ ಬೇಲೂರು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಆನೆ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿದೆ. ಶೀಘ್ರವಾಗಿ ಅವುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಆನೆಗಳ ಹಾವಳಿ ಕಡಿಮೆ ಮಾಡಲು ಅವುಗಳ ಚಲನವಲನದ ಮೇಲೆ ಕಣ್ಣಿಡಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು. ಬೇಲೂರು ತಾಲೂಕಿಗೂ ಕಾಡಾನೆ ಉಪಟಳ ವಿಸ್ತರಿಸಿರುವುದರಿಂದ ಪ್ರಾಣ ಹಾನಿಯಾಗದಂತೆ ಆನೆಗಳ ಓಡಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿಎಫ್‌ಒಗೆ ಸೂಚನೆ ನೀಡಿದರು.
ಕಾಫಿ ಬೆಳೆಗಾರರು ಕಾಡಾನೆ ಹಾವಳಿಯಿಂದ ನಷ್ಟ ಅನುಭವಿಸುತ್ತಿದ್ದು, ಕಾಫಿ ಬೆಳೆಗೆ ಶೇ.75 ರಷ್ಟು ಪರಿಹಾರ ಧನದ ದರವನ್ನು ಹೆಚ್ಚಿಸಲು ಪ್ರಸ್ತಾವನೆ ಕಳುಹಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು ಹಾಗೂ ರೈತರ ಜಮೀನುಗಳಿಗೆ ಆನೆಗಳು ನುಗ್ಗದಂತೆ ಸುತ್ತಲೂ ಕಂದಕ ತೋಡಿಸುವ ಕ್ರಮವನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು.
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಬೆಳೆ ಸಾಲ ಹಾಗೂ ಅವಧಿ ಸಾಲ ಮರುಪಾವತಿಸುವ ಗಡುವನ್ನು ಆಗಸ್ಟ್ ಅಂತ್ಯಕ್ಕೆ ಮುಂದೂಡಿದ್ದು, ಈ ವಿಷಯ ಕುರಿತು ಎಲ್ಲ ಬ್ಯಾಂಕ್‌ಗಳಿಗೂ ಇ-ಮೇಲ್ ಕಳುಹಿಸಿ ಮಾಹಿತಿ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಮಾತನಾಡಿ, ಆನೆಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಡಗು-ಹಾಸನ ಗಡಿ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸಿ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ಡೇರಿಗೆ ಹಾಲು ಹಾಕಲು ಹೋಗುತ್ತಾರೆ. ಹಾಗೂ ಮಕ್ಕಳು ಶಾಲೆಗೆ ಓಡಾಡುತ್ತಾರೆ ಹಾಗಾಗಿ ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಸಂಖ್ಯೆ ಹೆಚ್ಚಿಸಬೇಕು. ಆನೆ ಹಾವಳಿ ತಡೆಯಲು ಸೋಲಾರ್ ಬೇಲಿ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಹಾಗೂ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಟಾಸ್ಕ್ ಫೋರ್ಸ್ ಸದಸ್ಯರು ಹಾಗೂ ರೈತರು ಮನವಿ ಮಾಡಿದರು. ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮತ್ತಿತರರು ಹಾಜರಿದ್ದರು.