ವಾಯುಭಾರ ಕುಸಿತ ಪರಿಣಾಮ:ಸಿಲಿಕಾನ್​ ಸಿಟಿಯಲ್ಲಿ ಜಿಟಿ ಜಿಟಿ ಮಳೆ

silicon
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜಧಾನಿಯಲ್ಲಿ ಗುರುವಾರ ಜಿಟಿ ಜಿಟಿ ಮಳೆಯಾಗಿದ್ದು, ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಯಿತು.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದ ಜತೆಗೆ ಮಳೆ ಬೀಳುತ್ತಿತ್ತು. ಸಂಜೆ ವೇಳೆ ನಗರದ ವಿವಿಧ ಬಡಾವಣೆಗಳಲ್ಲಿ ತುಸು ಬಿರುಸಾಗಿ ವರ್ಷಧಾರೆಯಾಯಿತು. ಎರಡು ದಿನದಿಂದ ಮೋಡ ಕವಿದ ವಾತಾವರಣ ಇರುವ ಹಿನ್ನೆಲೆಯಲ್ಲಿ ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕುಸಿತವಾದ ಪರಿಣಾಮ ಥಂಡಿ ವಾತಾವರಣ ಮುಂದುವರಿದಿದೆ. ಸೋಮವಾರ ಗರಿಷ್ಠ ತಾಪಮಾನದಲ್ಲಿ 25.9 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು.

ಕೆ.ಆರ್​.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್​ಪೇಟೆ, ಬಳೇಪೇಟೆ, ಕಾಟನ್​ಪೇಟೆ, ವಿಜಯನಗರ, ಕಾಮಾಪಾಳ್ಯ, ಮೆಜೆಸ್ಟಿಕ್​, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪಿಠ, ಹಗದೂರು, ಯಲಹಂಕ, ಆರ್​.ಆರ್​. ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರೆಕೆರೆ, ಎಚ್​ಎಸ್​ಆರ್​ ಲೇಔಟ್​, ನಾಗಪುರ, ಕಾಟನ್​ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್​, ಹೂಡಿ ಸೇರಿ ನಗರ ವಿವಿಧೆಡೆ ಜಿಟಿಜಿಟಿ ಮಳೆಯಾಯಿತು.

ನಾಳೆ ಜೋರು ಮಳೆ: ನಗರದಲ್ಲಿ ಸುರಿಯುತ್ತಿರುವ ಮುಂದಿನ 2 ದಿನ ಮುಂದುವರಿಯಲಿದೆ. ಸಿಲಿಕಾನ್​ ಸಿಟಿಯಲ್ಲಿ ಶುಕ್ರವಾರ(ಡಿ.13) ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅರ್ಲಟ್​ ನೀಡಲಾಗಿದೆ. ಡಿ.14ರಂದು ಸಾಧಾರಣ ವರ್ಷಧಾರೆಯಾದರೆ, ಡಿ.15ರಿಂದ ಡಿ.17ರವರೆಗೆ ಒಣಹವೆ ಇರಲಿದೆ. ಡಿ.18ರಿಂದ ಮುಂದಿನ 2 ದಿನ ನಗರದಲ್ಲಿ ಮತ್ತೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ.ಕೆಲವೊಮ್ಮೆ ಭಾರಿ ಮಳೆಯಾಗಲಿದೆ. ಬೆಳಗ್ಗಿನ ಜಾವದಲ್ಲಿ ಮಂಜು ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net