ಇಮ್ಯೂನಿಟಿ ದಂಧೆ: ಉತ್ಪನ್ನಗಳ ಮಾರಾಟಕ್ಕೆ ವಂಚಕರ ಹೊಸ ಮಾರ್ಗ

Imunity
Published on

| ಬೇಲೂರು ಹರೀಶ ಬೆಂಗಳೂರು

ಕರೊನಾ ಔಷಧದ ಹೆಸರಿನಲ್ಲಿ ವಂಚನೆ ಎಸಗಿರುವ ಪ್ರಕರಣಗಳ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪದಾರ್ಥಗಳ ಹೆಸರಿನಲ್ಲೂ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವ ದಂಧೆ ರಾಜ್ಯಾದ್ಯಂತ ಸದ್ದಿಲ್ಲದೆ ನಡೆಯುತ್ತಿದೆ.

ರೋಗನಿರೋಧಕ ಶಕ್ತಿ (ಇಮ್ಯೂನಿಟಿ)ಹೆಚ್ಚಿಸಿಕೊಂಡು ಕರೊನಾದಿಂದ ದೂರವಿರಬಹುದೆಂದು ಪ್ರಚಾರ ನಡೆಸುತ್ತ ತರಹೇವಾರಿ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ನಿದರ್ಶನಗಳು ದಿನಕಳೆದಂತೆ ಹೆಚ್ಚಾಗುತ್ತಿವೆ. ಕರೊನಾಗೆ ಸ್ಪಂದಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಜತೆಗೆ ಕರೊನಾದಿಂದ ದೂರವಿರಲು ಪದೇಪದೆ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸಿ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಜನರಿಗೆ ಸಲಹೆ ಕೊಟ್ಟಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ದುಡ್ಡು ಲೂಟಿ ಹೊಡೆಯಲಾರಂಭಿಸಿದ್ದಾರೆ.

ಮೊದಲನೇ ಪುಟದಿಂದ...

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆಂದು ಫಲಕ ಹಾಕಿಕೊಂಡಿರುವ ಕೆಲವೊಂದು ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಮೆಡಿಸಿನಲ್ ಡ್ರಿಂಕ್ಸ್, ಕಷಾಯ, ಕೆಲ ಆಹಾರ ಪದಾರ್ಥ, ವಿಟಮಿನ್ ಮತ್ತು ಪ್ರೋಬಯಾಟಿಕ್ಸ್ ಒಳಗೊಂಡಿದೆ ಎನ್ನಲಾದ ಉತ್ಪನ್ನಗಳು ಮೆಡಿಕಲ್ ಶಾಪ್​ಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್​ಗಳಲ್ಲಿ ಲಭ್ಯವಿವೆ. ಆದರೆ ಇವುಗಳಲ್ಲಿ ಬಹುತೇಕ ಉತ್ಪನ್ನಗಳು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆಗೆ ಒಳಪಟ್ಟಿಲ್ಲ ಎಂದು ತಜ್ಞರು ಹೇಳುತ್ತಾರೆ.

ಇಮ್ಯೂನಿಟಿ ಬಜ್ಜಿ, ಬೋಂಡಾ!: ಗುಜರಾತ್​ನಲ್ಲಿ ಕರೊನಾ ವಿರುದ್ಧದ ಹೋರಾಟಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆಂದು ಇಮ್ಯೂನಿಟಿ ಕಾಕ್ರ, ಬಜ್ಜಿ, ಬೋಂಡಾ, ಮಣಿಸಿನಕಾಯಿ ಬಜ್ಜಿ, ಅರಿಶಿಣ ಹಾಕಿ ತಯಾರಿಸಿದ ಆಹಾರ ಪದಾರ್ಥಗಳನ್ನು ಇಮ್ಯೂನಿಟಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಜಾಸ್ತಿ ಅರಿಶಿಣ ಬೇಡ: ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ನಿಗದಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅರಿಶಿಣ ಸೇವಿಸುತ್ತಿರುವುದರಿಂದ ಬೇರೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ರಾತ್ರಿ ವೇಳೆ ಹೆಚ್ಚಿನ ಜನರು ಹಾಲಿನ ಜತೆಗೆ ಅರಿಶಿಣ ಹಾಕಿ ಕುಡಿಯುತ್ತಿದ್ದಾರೆ. ಆದರೆ, ಹೆಚ್ಚು ಸೇವನೆ ಬೇಡ. ಒಂದು ಲೋಟ ಹಾಲಿಗೆ ನಿಗದಿತ ಪ್ರಮಾಣದಷ್ಟೇ ಅರಿಶಿಣ ಹಾಕಿ ಕುಡಿಯಿರಿ ಎಂಬುದು ಆರೋಗ್ಯ ತಜ್ಞರ ಸಲಹೆ.

ಎಲ್ಲದರಲ್ಲೂ ಕಲಬೆರಕೆ: ಕಾಫಿ, ಟೀ ಪುಡಿ, ಬೆಣ್ಣೆ, ತುಪ್ಪ, ಹಾಲು, ಮೀನು ಹಾಗೂ ಅಡುಗೆ ಎಣ್ಣೆ ಪದಾರ್ಥ ಎಲ್ಲದರಲ್ಲೂ ಕಲಬೆರಕೆ ಅಂಶವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯೇ ಪತ್ತೆಹಚ್ಚಿದೆ. ಅಲ್ಲದೇ ಹೋಂ ಮೇಡ್ ಚಾಕಲೇಟ್, ಮಾಂಸ, ಕೋಳಿ ಉತ್ಪನ್ನ, ಹಣ್ಣು, ತರಕಾರಿ, ಸಿರಿಧಾನ್ಯ, ಜಾಮ್ ಜೆಲ್ಲಿ, ಖಾದ್ಯ

ಎಣ್ಣೆ, ಹನಿ, ಬೆಲ್ಲ, ಸಿದ್ಧಪಡಿಸಿದ ಆಹಾರ, ಮೆಣಸಿನಕಾಯಿ ಪೌಡರ್, ಮಸಾಲೆ ಪದಾರ್ಥ, ದ್ವಿದಳ ಧಾನ್ಯ, ಬೇಕರಿ ಉತ್ಪನ್ನ, ಸಿಹಿ ತಿಂಡಿ, ಪಾನೀಯ, ಸಂಸ್ಕರಿಸಿದ

ಆಹಾರ ಹಾಗೂ ಹೆಪು್ಪಗಟ್ಟಿದ ಆಹಾರದಲ್ಲಿಯೂ ಕಲಬೆರಕೆ ಅಂಶಗಳು ಪತ್ತೆಯಾಗಿವೆ.

ತಜ್ಞರು ಏನಂತಾರೆ

ಇಮ್ಯೂನಿಟಿ ಕಿಟ್, ತರಹೇವಾರಿ ಪೌಡರ್, ಅರಿಶಿಣ ಮಿಶ್ರಿತ ಪೌಡರ್, ಪಾನೀಯ, ಇಮ್ಯೂನಿಟಿ ಬೂಸ್ಟ್ ಹೆಸರಲ್ಲಿ ಆಹಾರ ಪದಾರ್ಥಗಳಿವೆ. ಕೆಲವರು ಹಳೆಯ ಆಹಾರ ಪದಾರ್ಥ ಗಳನ್ನೇ ಮರು ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಯವರ ಮಾತಿಗೆ ಮರಳಾಗಿ ಜನರು ಪರಿಶೀಲಿಸದೆಯೆ ಇಂಥ ವಸ್ತುಗಳನ್ನು ಖರೀದಿಸಬಾರದು ಎಂದು ಎಚ್ಚರಿಕೆ ನೀಡುತ್ತಾರೆ ಆಹಾರ ತಜ್ಞರು.

ಇಮ್ಯೂನಿಟಿ ಹೆಚ್ಚಳ ಹೇಗೆ?

ಹಣ್ಣು, ತರಕಾರಿ, ಗಡ್ಡೆ-ಗೆಣಸು, ಸೊಪು್ಪ, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು, ಮೀನು, ಮೊಟ್ಟೆ, ಮಾಂಸ ಸೇರಿ ಎಲ್ಲ ರೀತಿಯ ಆಹಾರ ಸೇವಿಸಿದರೆ ರೋಗನಿರೋಧಕ ಶಕ್ತಿ ಬರುತ್ತದೆ. ಬರೀ ಒಂದೇ ರೀತಿ ಆಹಾರ ಸೇವಿಸಿದರೆ ಇಮ್ಯೂನಿಟಿ ಸಿಗುವುದಿಲ್ಲ. ಪಾಲಿಷ್ ಮಾಡಿದ ಏಕದಳ ಧಾನ್ಯಗಳಲ್ಲಿ ಪೋಷಕಾಂಶ ಇರುವುದಿಲ್ಲ. ಎಲ್ಲ ರೀತಿಯ ಹಣ್ಣು ಮತ್ತು ತರಕಾರಿ ಸೇವಿಸಬೇಕು. ವಿಟಮಿನ್ ಡಿ ಅಂಶವುಳ್ಳ ಅಣಬೆ ಮತ್ತಿತರ ಆಹಾರ ಸೇವಿಸಬೇಕು. ಸಮುದ್ರದ ಮೀನು ಗಳಲ್ಲಿ ವಿಟಮಿನ್ ಅಂಶ ಹೆಚ್ಚಿರುವುದರಿಂದ ಅದನ್ನು ಸೇವಿಸಬೇಕು. ನಾಟಿ ಕೋಳಿ, ಕುರಿ, ಮೇಕೆ ಮಾಂಸ ಸೇವಿಸಿದರೆ ಒಳ್ಳೆಯದು. ಒಂದು ಕ್ಯಾಲರಿಗೆ ಒಂದು ಎಂಎಲ್ ನೀರು ಕುಡಿಯಬೇಕು. ಸಾಮಾನ್ಯವಾಗಿ ಪ್ರತಿ ನಿತ್ಯ 2ರಿಂದ 2 ಸಾವಿರ ಕ್ಯಾಲರಿ ಆಹಾರ ಸೇವಿಸುತ್ತೇವೆ. ಅದಕ್ಕೆ ತಕ್ಕಂತೆ ನೀರು ಕುಡಿಯಬೇಕು. ಸಕ್ಕರೆ ಅಂಶವುಳ್ಳ ಆಹಾರ ತ್ಯಜಿಸಬೇಕು ಎಂದು ಆಹಾರ ತಜ್ಞ ಕೆ.ಸಿ.ರಘು ಮಾಹಿತಿ ನೀದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net