ಅನೈತಿಕ ಸಂಬಂಧ ಶಂಕೆ, ಯುವಕನ ಬರ್ಬರ ಕೊಲೆ

crime fir
Published on

ಬೈಲಹೊಂಗಲ: ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಶಂಕಿಸಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಗ್ರಾಮದ ಜನತಾ ಪ್ಲಾಟ್‌ನಲ್ಲಿ ಬುಧವಾರ ನಡೆದಿದೆ. ಅದೇ ಗ್ರಾಮದ ದ್ಯಾಮಪ್ಪ ನಾಗಪ್ಪ ವಣ್ಣೂರ (22) ಕೊಲೆಯಾದ ಯುವಕ.

ಈರಪ್ಪ ಎಂಬ ವ್ಯಕ್ತಿ ತನ್ನ ಪತ್ನಿ ಲಕ್ಷ್ಮೀ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನೆಂದು ಸಂಶಯ ವ್ಯಕ್ತಪಡಿಸಿದ್ದನು. ಈ ಕುರಿತು ಹಲವು ತಿಂಗಳಿಂದ ತಂಟೆ- ತಕಾರರು ನಡೆದಿದ್ದವು. ಸವದತ್ತಿ ತಾಲೂಕಿನ ಧೂಪದಾಳ ಗ್ರಾಮಕ್ಕೆ ದ್ಯಾಮಪ್ಪ ತನ್ನ ತಂದೆ ನಾಗಪ್ಪನೊಂದಿಗೆ ಬೈಕ್ ಮೇಲೆ ಹೋಗುವಾಗ ಈರಪ್ಪ ಹಾಗೂ ಇತರರು ವಾಹನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಬಳಿಕ ದ್ಯಾಮಪ್ಪನ ತಂದೆ ಹಾಗೂ ತಾಯಿಯ ಕೊಲೆಗೂ ಪ್ರಯತ್ನಿಸಿದ್ದಾರೆ. ಹೊಸಕುರಗುಂದ ಗ್ರಾಮದ ಯಲ್ಲಪ್ಪ ರೋಗಪ್ಪ ಕೊಡ್ಲಿ, ತಂಗೆವ್ವ ಯಲ್ಲಪ್ಪ ಕೊಡ್ಲಿ, ರೇಣುಕಾ ಕೊಲೆ ಮಾಡಿದ ಆರೋಪಿಗಳು ಎನ್ನಲಾಗಿದೆ. ಮೃತನ ತಂದೆ ನಾಗಪ್ಪ ವಣ್ಣೂರ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net